ಮೂಡುಬಿದಿರೆ: ಒಂದು ಕಾಲದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮುಂಚೂಣಿಯಲ್ಲಿ ನಿಂತಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರ ತವರು ಪ್ರದೇಶದಲ್ಲೇ ಇಂದು ಮೂಲಸೌಕರ್ಯದ ದುಸ್ಥಿತಿ ಎದ್ದು ಕಾಣುತ್ತಿದೆ. ಮೂಡುಬಿದಿರೆ ತಾಲೂಕಿನ ಕಡಂದಲೆ ಗ್ರಾಮದ ಹೊಸಂಗಡಿ–ಆಲಗುಂಡಿ ಸಂಪರ್ಕ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ನಿತ್ಯ ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡಿದೆ.
ಸುಮಾರು ಒಂದೂವರೆ ಕಿಲೋಮೀಟರ್ ಉದ್ದದ ಈ ರಸ್ತೆ ಹಲವು ವರ್ಷಗಳಿಂದ ಸಮರ್ಪಕ ದುರಸ್ತಿ ಕಾಣದೆ ಹೊಂಡಮಯವಾಗಿದೆ. ಪರಾರಿ ಎಸ್‌ಸಿ ಕಾಲೋನಿ, ಪಾಪೇಡಿ, ಕುಮೇರ್ ಸೇರಿದಂತೆ 50ಕ್ಕೂ ಹೆಚ್ಚು ಕುಟುಂಬಗಳು ಇದೇ ರಸ್ತೆಯನ್ನು ಅವಲಂಬಿಸಿದ್ದು, ಪ್ರತಿದಿನ ಜೀವದ ಹಂಗಿನಲ್ಲೇ ಸಂಚರಿಸುವಂತಾಗಿದೆ.
ಮಳೆಗಾಲದಲ್ಲಿ ಮತ್ತಷ್ಟು ದುಸ್ತರ ಕಡಂದಲೆ ದೇವಸ್ಥಾನ ರಸ್ತೆಯಿಂದ ಕವಲೊಡೆಯುವ ಸ್ಥಳದಿಂದಲೇ ರಸ್ತೆಯ ದುಸ್ಥಿತಿ ಆರಂಭವಾಗುತ್ತದೆ. ರಸ್ತೆಯುದ್ದಕ್ಕೂ ಡಾಂಬರು ಕಿತ್ತುಹೋಗಿ ಆಳವಾದ ಹೊಂಡಗಳು ನಿರ್ಮಾಣವಾಗಿವೆ. ಮಳೆ ಬಂದಾಗ ಈ ಹೊಂಡಗಳಲ್ಲಿ ನೀರು ತುಂಬಿ ರಸ್ತೆ ಸಂಪೂರ್ಣ ಮುಚ್ಚಿಹೋಗುವುದರಿಂದ ಹೊಂಡಗಳ ಆಳವೇ ಗೋಚರಿಸುವುದಿಲ್ಲ. ಪರಿಣಾಮ ದ್ವಿಚಕ್ರ ವಾಹನ ಸವಾರರು ಪ್ರತಿದಿನ ಅಪಘಾತದ ಭೀತಿಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ಈ ರಸ್ತೆ ದೊಡ್ಡ ಸವಾಲಾಗಿದೆ. ರಾತ್ರಿ ವೇಳೆ ಸಂಚಾರ ಇನ್ನಷ್ಟು ಅಪಾಯಕಾರಿಯಾಗುತ್ತಿದೆ.
ರೈತರಿಗೆ ಆರ್ಥಿಕ ಹೊರೆ ಕೃಷಿ ಪ್ರಧಾನ ಪ್ರದೇಶವಾಗಿರುವುದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಇದೇ ರಸ್ತೆಯನ್ನು ಬಳಸುತ್ತಿದ್ದಾರೆ. ರಸ್ತೆ ಹದಗೆಟ್ಟಿರುವುದರಿಂದ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿದ್ದು, ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ರಸ್ತೆ ಅಡ್ಡಿಯಾಗುತ್ತಿದೆ.
ಗ್ರಾಮಸ್ಥರ ತ್ಯಾಗದಿಂದ ನಿರ್ಮಾಣಗೊಂಡ ರಸ್ತೆ ಈ ರಸ್ತೆಯ ನಿರ್ಮಾಣದ ಹಿಂದೆ ಗ್ರಾಮಸ್ಥರ ತ್ಯಾಗ ಹಾಗೂ ಸಹಕಾರ ಅಡಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಸ್ಮರಿಸುತ್ತಾರೆ. 1993ರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಲವು ಅಡೆತಡೆಗಳ ನಡುವೆಯೂ ನಿವೃತ್ತ ಶಿಕ್ಷಕ ಗೋವಿಂದ ಮಾಸ್ಟರ್ ಅವರ ಪುತ್ರ ರಾಮಕೃಷ್ಣ ಮಾಸ್ಟರ್, ನಾರಾಯಣ ಮಡಿವಾಳ, ದೊಂಬಶೆಟ್ಟಿ ಹಾಗೂ ಕುಟ್ಟಿ ಶೆಟ್ಟಿ ತಮ್ಮ ಜಾಗ ಬಿಟ್ಟುಕೊಟ್ಟ ಪರಿಣಾಮ ಹೊಸಂಗಡಿ–ಆಲಗುಂಡಿವರೆಗೆ ರಸ್ತೆ ನಿರ್ಮಿಸಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯಿಂದ ₹25 ಸಾವಿರ ಅನುದಾನ ದೊರೆತಿದ್ದರೂ, ತಮ್ಮ ಸ್ವಂತ ಗದ್ದೆಯ ಮಣ್ಣನ್ನು ಬಳಸಿ ವೈಯಕ್ತಿಕವಾಗಿ ₹25 ಸಾವಿರ ವೆಚ್ಚ ಮಾಡಿ ರಸ್ತೆ ನಿರ್ಮಿಸಲಾಗಿತ್ತು. ನಂತರ ಒಂದೆರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ, ಉದ್ಯೋಗ ಖಾತರಿ ಯೋಜನೆಯಡಿ ಕಾಂಕ್ರೀಟ್ ಕಾಮಗಾರಿ ಹಾಗೂ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾಗಿದ್ದ ವೇಳೆ ಸುಮಾರು ₹4ರಿಂದ ₹5 ಲಕ್ಷ ಅನುದಾನ ಮಂಜೂರು ಮಾಡಿ ಗುಣಮಟ್ಟದ ಡಾಂಬರೀಕರಣ ನಡೆಸಲಾಗಿತ್ತು. ಈ ಕಾಮಗಾರಿ ಸುಮಾರು ಏಳು-ಎಂಟು ವರ್ಷಗಳ ಹಿಂದೆ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ.
ಅಪಘಾತಕ್ಕೂ ಮುನ್ನ ಕ್ರಮ ಅಗತ್ಯ ಹಲವು ವರ್ಷಗಳಿಂದ ರಸ್ತೆ ದುರಸ್ತಿ ಆಗದ ಕಾರಣ ಸ್ಥಳೀಯರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಮಳೆಗಾಲದಲ್ಲಿ ರಸ್ತೆ ಇನ್ನಷ್ಟು ಅಪಾಯಕಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಪಘಾತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನೆಚ್ಚರಿಕೆಯಾಗಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವುದು ಅಗತ್ಯ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
'ಜನರ ಸಂಕಷ್ಟ ಗಮನಿಸಿ ರಸ್ತೆ ದುರಸ್ತಿಗೊಳಿಸಿ' ರಸ್ತೆ ದುರಸ್ತಿಗಾಗಿ ಹಲವು ಬಾರಿ ಮನವಿ ಸಲ್ಲಿಸಲು ಪ್ರಯತ್ನಿಸಿದ್ದೇನೆ. ಈಗ ನಾನು ಯಾವುದೇ ಅಧಿಕಾರದ ಸ್ಥಾನದಲ್ಲಿಲ್ಲ. ರಸ್ತೆ ಅಭಿವೃದ್ಧಿಪಡಿಸುವ ಜವಾಬ್ದಾರಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯದ್ದು. ಈ ರಸ್ತೆಯನ್ನು ಅವಲಂಬಿಸಿರುವ 50ಕ್ಕೂ ಹೆಚ್ಚು ಕುಟುಂಬಗಳ ಸಂಕಷ್ಟವನ್ನು ಗಮನಿಸಿ ಶೀಘ್ರ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಕೆ.ಪಿ. ಸುಚರಿತ ಶೆಟ್ಟಿ ಮನವಿ ಮಾಡಿದ್ದಾರೆ.
ಸ್ಥಳೀಯರ ಪ್ರಕಾರ, ರಸ್ತೆ ಸಂಪೂರ್ಣ ಮರುಡಾಂಬರೀಕರಣ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ. ಪ್ರತಿದಿನ ನೂರಾರು ಮಂದಿ ಬಳಸುವ ಈ ಸಂಪರ್ಕ ರಸ್ತೆಯನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
"ರಸ್ತೆ ದುರಸ್ತಿಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಶಾಸಕರಿಂದ ಸ್ಪಂದನೆ ದೊರೆಯಲಿಲ್ಲ. ಜನಪ್ರತಿನಿಧಿಗಳಿಗೆ ವೈಯಕ್ತಿಕ ದ್ವೇಷ ಇದ್ದರೆ ಅದರ ಹೊರೆ ಸಾಮಾನ್ಯ ಜನರೇ ಹೊರುವಂತಾಗುತ್ತದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡರೆ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ." – ಕೆ.ಪಿ. ಸುಚರಿತ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ
ವಿಶೇಷ ವರದಿ : ಯಶೋಧರ ವಿ. ಬಂಗೇರ