ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಕೃಷ್ಣಾಪುರ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಗ್ರಾಹಕರ ಸಭೆ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾಪುರ ಶಾಖೆಯಲ್ಲಿ ನಡೆಯಿತು.
ಸಂಘದ ಗ್ರಾಹಕರಾದ ಪಿ.ಕೆ. ಉಪಾಧ್ಯಾಯ, ಅನಿಲ್ ಕುಮಾರ್, ಬಾಲಚಂದ್ರ ಪಣಂಬೂರು, ಶೋಭ, ಅಬ್ದುಲ್ ಖಾದರ್ ಹಾಗೂ ಎಚ್.ಆರ್. ಯದುನಂದಿನಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಭಾಷಣ ಮಾಡಿದ ಪಿ.ಕೆ. ಉಪಾಧ್ಯಾಯ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕೃಷ್ಣಾಪುರ ಪರಿಸರದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ದೈನಂದಿನ ಹಣಕಾಸು ವ್ಯವಹಾರಗಳಿಗೆ ವಿಶ್ವಾಸಾರ್ಹ ಸಹಕಾರಿ ಸಂಸ್ಥೆಯಾಗಿ ಬೆಳೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇನ್ನಷ್ಟು ಶಾಖೆಗಳನ್ನು ಆರಂಭಿಸಲಿ ಎಂದು ಆಶಿಸಿದರು.
ಅನಿಲ್ ಕುಮಾರ್ ಮಾತನಾಡಿ, ಸಂಘವು ಗ್ರಾಹಕ ಸ್ನೇಹಿ ಸೇವೆ ನೀಡುತ್ತಿದ್ದು, ಶಾಖೆಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಸಿಬ್ಬಂದಿ ಆತ್ಮೀಯವಾಗಿ ಸ್ಪಂದಿಸಿ ಉತ್ತಮ ಸೇವೆ ಒದಗಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಗ್ರಾಹಕರ ಪ್ರೋತ್ಸಾಹದಿಂದ ಸಂಘವು ನಿರಂತರ ಪ್ರಗತಿ ಸಾಧಿಸಿದೆ. ಬ್ಯಾಂಕಿಂಗ್ ಸೇವೆಗಳ ಜೊತೆಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸದಸ್ಯರಿಗೆ ಸ್ಪರ್ಧಾತ್ಮಕ ದರದಲ್ಲಿ ವಿಮಾ ಸೌಲಭ್ಯ, ಅಗತ್ಯ ಸಂದರ್ಭಗಳಲ್ಲಿ ಮನೆ ಬಾಗಿಲಿಗೆ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷ್ಣಾಪುರ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ 500 ದಿನಗಳ ಠೇವಣಿಗಳಿಗೆ ಶೇ.10 ಹಾಗೂ 1000 ದಿನಗಳ ಠೇವಣಿಗಳಿಗೆ ಶೇ.10.50 ವಿಶೇಷ ಬಡ್ಡಿದರ ಘೋಷಿಸಲಾಗಿದೆ. ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಠ ಮೌಲ್ಯವನ್ನು ಯಾವುದೇ ಸೇವಾ ಶುಲ್ಕವಿಲ್ಲದೆ ಸದಸ್ಯರಿಗೆ ನೀಡಲಾಗುವುದು ಎಂದು ಹೇಳಿದರು. ರಮಾನಾಥ ಸನಿಲ್, ಸೌಮ್ಯ ವಿಜಯ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಅಶ್ವಿನಿ ಸ್ವಾಗತಿಸಿದರು. ಸುಜಾತ ಕಾರ್ಯಕ್ರಮ ನಿರೂಪಿಸಿದರು.