ಮೂಡುಬಿದಿರೆ: ಪಾಲಡ್ಕ ಗ್ರಾಮದ ಕೇಮಾರ್‌ನಲ್ಲಿ ವಾಸಿಸುತ್ತಿರುವ ಸುಮಾರು 80 ವರ್ಷದ ಕುಡುಮಿಲ ಹಾಗೂ ಸುಮಾರು 70 ವರ್ಷದ ಕೂಸು ದಂಪತಿಯ ಮನೆಗೆ ಒಂದು ತಿಂಗಳಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಲಯನ್ಸ್ ಕ್ಲಬ್ ಅಲಂಗಾರ್ ವತಿಯಿಂದbಮರುಸ್ಥಾಪಿಸಿ ಮಾನವೀಯ ಸೇವೆ ಸಲ್ಲಿಸಲಾಯಿತು
ಮಕ್ಕಳಿಲ್ಲದ ಈ ವೃದ್ಧ ದಂಪತಿ ನಡೆದಾಡಲೂ ಅಸಾಧ್ಯವಾದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು, ವಿದ್ಯುತ್ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಮಾಜಿ ಪಂಚಾಯಿತಿ ಸದಸ್ಯ ಸತೀಶ್ ಮಾರ್ಲ ಅವರ ಕೋರಿಕೆಯ ಮೇರೆಗೆ ಲಯನ್ಸ್ ಕ್ಲಬ್ ಅಲಂಗಾರ್‌ನ ನಿಕಟಪೂರ್ವ ಅಧ್ಯಕ್ಷ ಅಮಿತ್ ಡಿಸೋಜ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಂಡರು. ಮನೆಯ ಸಂಪೂರ್ಣ ಸರ್ವಿಸ್ ವೈರ್ ಬದಲಾಯಿಸಿ, ಹೊಸ ಮೇನ್ ಸ್ವಿಚ್ ಹಾಗೂ ಫ್ಯೂಸ್ ಅಳವಡಿಸಿ ವಿದ್ಯುತ್ ಸಂಪರ್ಕವನ್ನು ಪುನಃ ಕಲ್ಪಿಸಲಾಯಿತು. ಈ ಸೇವಾ ಕಾರ್ಯಕ್ಕೆ ಒಟ್ಟು ₹4,075 ವೆಚ್ಚವಾಗಿದ್ದು, ಅದರ ಸಂಪೂರ್ಣ ವೆಚ್ಚವನ್ನು ಅಮಿತ್ ಡಿಸೋಜ ಭರಿಸಿದರು.
ವಿದ್ಯುತ್ ವ್ಯತ್ಯಯದ ಸಂದರ್ಭದಲ್ಲೂ ದಂಪತಿ ಕತ್ತಲೆಯಲ್ಲಿ ಇರಬಾರದೆಂಬ ಉದ್ದೇಶದಿಂದ ಎರಡು ಇನ್ವರ್ಟರ್ ಬಲ್ಬ್‌ಗಳನ್ನು ಸಹ ನೀಡಲಾಯಿತು. ಲಯನ್ ಮೈಕಲ್ ಸಿಕ್ವೇರಾ ಸಹಕಾರ ನೀಡಿದ್ದಾರೆ.
ಅಮಿತ್ ಡಿಸೋಜ ಅವರು ವೃದ್ಧ ದಂಪತಿಯ ಮನೆಗೆ ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳು ದಾನಿಗಳ ನೆರವಿನಿಂದ ಸುಮಾರು ₹1,000 ಮೌಲ್ಯದ ದಿನಸಿ ಸಾಮಗ್ರಿಗಳನ್ನು ನಿರಂತರವಾಗಿ ತಲುಪಿಸುತ್ತಿದ್ದಾರೆ.