ಮೂಡುಬಿದಿರೆ: ತೆಂಕಮಿಜಾರು ಗ್ರಾಮದ ರಾಷ್ಟ್ರೀಯ ಹೆದ್ದಾರಿ-169 ಕಾಮಗಾರಿ ವೇಳೆ ಸ್ವಾಧೀನಗೊಳ್ಳದ ಖಾಸಗಿ ಜಮೀನಿನಲ್ಲಿ ಕಾಮಗಾರಿ ನಡೆಸಿ ಬೆಳೆ ಹಾಗೂ ಆಸ್ತಿಗೆ ಹಾನಿ ಉಂಟುಪಡಿಸಲಾಗಿದೆ ಎಂದು ಆರೋಪಿಸಿ ಭೂ ಮಾಲಕ ಬ್ರಿಜೇಶ್ ಕುಮಾರ್ ಶೆಟ್ಟಿ ಎಂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ-169 ವಿಶೇಷ ಭೂಸ್ವಾಧೀನಾಧಿಕಾರಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.

ಬ್ರಿಜೇಶ್ ಕುಮಾರ್ ಶೆಟ್ಟಿ ಎಂ. ಅವರ ಕೃಷಿ ಜಮೀನಿನ ಸರ್ವೆ ನಂಬರ್ 7/1ರಲ್ಲಿ 1002 ಚದರ ಮೀಟರ್ ಹಾಗೂ ಸರ್ವೆ ನಂಬರ್ 7/2ರಲ್ಲಿ 4047 ಚದರ ಮೀಟರ್ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ-169 ಕಾಮಗಾರಿಗಾಗಿ ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಗೊಂಡ ಭೂಮಿಯನ್ನು ಹೊರತುಪಡಿಸಿ ಉಳಿದ ಸರ್ವೆ ನಂಬರ್ 7/1ರ 1.8.25.00 ಎಕರೆ ಜಮೀನನ್ನು ಪ್ಲಾಟಿಂಗ್‌ಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಜುಲೈ 15ರಂದು ಮೂಡುಬಿದಿರೆ ಎಡಿಎಲ್‌ಆರ್ ಕಚೇರಿಯ ಭೂಮಾಪಕರು ಸ್ಥಳ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ ಎಸ್‌ಎಲ್‌ಎಒ, ಎನ್‌ಎಚ್-169 ಮಂಗಳೂರು ಕಚೇರಿಯ ಭೂಮಾಪಕ ದಾಸ್ ಪ್ರಭು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನಗೊಳ್ಳದ ಸುಮಾರು 30 ಸೆಂಟ್ಸ್ ಜಾಗದಲ್ಲಿಯೇ ಕಾಮಗಾರಿ ನಡೆಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾಮಗಾರಿ ನಡೆಸಿದ ಗುತ್ತಿಗೆದಾರರು ಖಾಸಗಿ ಜಮೀನಿನಲ್ಲಿದ್ದ ಅಡಿಕೆ ಹಾಗೂ ತೆಂಗಿನ ಮರಗಳನ್ನು ಕಡಿದು, ನೀರಾವರಿ ಪೈಪ್‌ಲೈನ್‌ಗಳನ್ನು ಹಾನಿಗೊಳಿಸಿದ್ದು, ಬೋರ್‌ವೆಲ್ ಮೇಲೆ ಮಣ್ಣು ಹಾಗೂ ಕಲ್ಲು ತುಂಬಿಸಿ ಅದರ ಸುತ್ತ ಜಲ್ಲಿ ಹರಡಿದ್ದಾರೆ. ಈ ಜಾಗವು ರಾಷ್ಟ್ರೀಯ ಹೆದ್ದಾರಿಗೆ ನೋಟಿಫಿಕೇಶನ್ ಆಗಿಲ್ಲ ಹಾಗೂ ಸ್ವಾಧೀನವೂ ಆಗಿಲ್ಲ. ಇದರಿಂದ ಆಸ್ತಿ ಹಕ್ಕಿಗೆ ಧಕ್ಕೆಯಾಗಿದ್ದು, ಆರ್ಥಿಕ ನಷ್ಟ ಉಂಟಾಗಿದೆ ಎಂದು ಬ್ರಿಜೇಶ್ ಕುಮಾರ್ ಶೆಟ್ಟಿ ಎಂ ದೂರಿನಲ್ಲಿ ತಿಳಿಸಿದ್ದಾರೆ.

ಸ್ವಾಧೀನಗೊಳ್ಳದ ಜಮೀನಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅತಿಕ್ರಮ ಪ್ರವೇಶ ಮಾಡದಂತೆ ಕ್ರಮ ಕೈಗೊಳ್ಳಬೇಕು. ಜಮೀನು, ಬೆಳೆ, ಮರಗಳು ಹಾಗೂ ಇತರ ಆಸ್ತಿಗಳಿಗೆ ಉಂಟಾದ ನಷ್ಟವನ್ನು ಮೌಲ್ಯಮಾಪನ ಮಾಡಿ ಸೂಕ್ತ ಪರಿಹಾರ ಪಾವತಿಸಬೇಕು. ಖಾಸಗಿ ಜಮೀನಿನಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದೇ ಸ್ಥಳದಲ್ಲಿ ಮೊದಲ ಮಳೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಳಪೆ ಕಾಮಗಾರಿಯಿಂದ ಹೊಸದಾಗಿ ನಿರ್ಮಾಣಗೊಂಡ ಹೆದ್ದಾರಿಯ ಭಾಗ ಕೊಚ್ಚಿ ಹೋಗಿದ್ದ ಘಟನೆ ನಡೆದಿತ್ತು ಎಂದು ಸ್ಥಳೀಯರು ಸ್ಮರಿಸಿದ್ದಾರೆ.