ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಯುವತಿಯ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ವಕ್ತಾರ ಪದ್ಮಪ್ರಸಾದ್ ಜೈನ್, ಆರೋಪಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಇಂತಹ ಕೃತ್ಯಗಳು ಮರುಕಳಿಸದಂತೆ ಕಾನೂನಿನ ಭಯ ಮೂಡುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಸಾರ್ವಜನಿಕರ ಸಮ್ಮುಖದಲ್ಲೇ ನಡೆದ ಈ ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು ಎಂದು ಪದ್ಮಪ್ರಸಾದ್ ಜೈನ್ ಹೇಳಿದರು. ಬಸ್ ನಿಲ್ದಾಣದಲ್ಲಿ ಜನರಿದ್ದರೂ ಯಾರೂ ಮಧ್ಯಪ್ರವೇಶಿಸದೆ, ಕೆಲವರು ವಿಡಿಯೊ ಚಿತ್ರೀಕರಣದಲ್ಲೇ ತೊಡಗಿದ್ದದ್ದು ವಿಷಾದನೀಯ ಬೆಳವಣಿಗೆ ಎಂದರು.
ಕೊಲೆ ಪ್ರಕರಣವನ್ನು ಧರ್ಮ ಅಥವಾ ಜಾತಿಯ ದೃಷ್ಟಿಯಿಂದ ನೋಡುವುದು ತಪ್ಪು ಎಂದು ಪದ್ಮಪ್ರಸಾದ್ ಜೈನ್ ಹೇಳಿದರು. ಕೊಲೆಗಾರರಿಗೆ ಧರ್ಮ ಮತ್ತು ಜಾತಿ ಇರುವುದಿಲ್ಲ. ಕಾನೂನು ಮತ್ತು ಸಂವಿಧಾನದ ಪ್ರಕಾರ ಕೊಲೆ ಎಸಗಿದ ವ್ಯಕ್ತಿ ಆರೋಪಿ ಹಾಗೂ ಅಪರಾಧಿ ಮಾತ್ರ. ಪ್ರಕರಣವನ್ನು ಅದೇ ದೃಷ್ಟಿಯಿಂದ ತನಿಖೆ ನಡೆಸಿ ಜಿಲ್ಲೆಯ ಸಾಮರಸ್ಯವನ್ನು ಕಾಪಾಡಬೇಕು ಎಂದು ಪೊಲೀಸರಿಗೆ ಮನವಿ ಮಾಡಿದರು.
ರಾಜ್ಯದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರದ ಪಾತ್ರವಿದ್ದರೂ, ಸ್ಥಳೀಯ ಅಧಿಕಾರಿಗಳ ಜವಾಬ್ದಾರಿಯೂ ಮಹತ್ವದ್ದಾಗಿದೆ ಎಂದರು. ಜಿಲ್ಲೆಯಲ್ಲಿ ಪೊಲೀಸ್ ಕಮಿಷನರ್ ಅಧಿಕಾರ ಸ್ವೀಕರಿಸಿದ ಬಳಿಕ ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದರಿಂದ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ ಮಾಹಿತಿ ಮತ್ತು ವದಂತಿಗಳನ್ನು ಹರಡುವುದು ತಪ್ಪು ಎಂದು ಪದ್ಮಪ್ರಸಾದ್ ಜೈನ್ ಎಚ್ಚರಿಸಿದರು. ಆರೋಪಿಯ ಕುರಿತು ಯಾವುದೇ ಮಾಹಿತಿ ಅಥವಾ ದಾಖಲೆಗಳಿದ್ದರೆ ಅವುಗಳನ್ನು ನೇರವಾಗಿ ಪೊಲೀಸರಿಗೆ ನೀಡಬೇಕು. ವಾಟ್ಸ್‌ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಹರಡುವುದು ತನಿಖೆಗೆ ಅಡ್ಡಿಯಾಗಬಹುದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.