ಮೂಡುಬಿದಿರೆ: ದಶಮಾನೋತ್ಸವ ಆಚರಿಸುತ್ತಿರುವ ಆಳ್ವಾಸ್ ಸಹಕಾರ ಸಂಘ(ನಿ) 2025-26ನೇ ಸಾಲಿನಲ್ಲಿ ₹200 ಕೋಟಿ ವ್ಯವಹಾರ ನಡೆಸಿದ್ದು, ₹4.08 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಎಂದಿನಂತೆ ಶೇ.17 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಶನಿವಾರ ನಡೆದ ಸಂಘದ 10ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು 10 ವರ್ಷಗಳಲ್ಲಿ 787 ಸದಸ್ಯರಿಂದ 7,270 ಸದಸ್ಯರಿಗೆ, ₹5.81 ಲಕ್ಷ ಠೇವಣಿಯಿಂದ ₹95 ಕೋಟಿಗೂ ಅಧಿಕ ಠೇವಣಿಗೆ, ₹60 ಸಾವಿರ ಲಾಭದಿಂದ ₹4.80 ಕೋಟಿ ಲಾಭಕ್ಕೆ ಬೆಳೆಯುವ ಮೂಲಕ ಶೇ.99.98 ಸಾಲ ಮರುಪಾವತಿ ಸಾಧಿಸಿದೆ. ಪ್ರಸ್ತುತ ₹90 ಕೋಟಿ ಠೇವಣಿ ಹೊಂದಿದ್ದು, ವರ್ಷಾಂತ್ಯಕ್ಕೆ ₹125 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಈ ವರ್ಷ ಮಿಜಾರಿನಲ್ಲಿ ವಿಸ್ತೃತ ಶಾಖೆ ಆರಂಭಿಸಿ, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸದಸ್ಯರ ಅನುಕೂಲಕ್ಕಾಗಿ ಸಹಕಾರಿ ಆ್ಯಪ್ ಪರಿಚಯಿಸಲಾಗಿದ್ದು, ಆಳ್ವಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸದಸ್ಯರಿಗೆ ವಿಮಾ ಯೋಜನೆ ಜಾರಿಗೊಳಿಸುವ ಚಿಂತನೆಯೂ ಇದೆ ಎಂದು ತಿಳಿಸಿದರು. 600 ಹಾಸಿಗೆಗಳ ವೈದ್ಯಕೀಯ ಕಾಲೇಜು ಆಸ್ಪತ್ರೆ, 150 ಎಂಬಿಬಿಎಸ್ ಸೀಟುಗಳು, ವ್ಯಸನಮುಕ್ತಿ, ವೃದ್ಧರ ಆರೈಕೆ ಕೇಂದ್ರಗಳ ವಿಸ್ತರಣೆ, ₹250–300 ವೆಚ್ಚದಲ್ಲಿ ಡಯಾಲಿಸಿಸ್, ₹5,000ರಲ್ಲಿ ಸುರಕ್ಷಿತ ಹೆರಿಗೆ ಸೇವೆ ನೀಡುವ ಗುರಿ ಹೊಂದಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ದ್ವಿತೀಯ ಪಿಯುಸಿ ಟಾಪರ್ ದಿಶಾ ಪೂಜಾರಿ ಸೇರಿದಂತೆ ವಿದ್ಯಾರ್ಥಿಗಳ ರಾಷ್ಟ್ರೀಯ ಸಾಧನೆ, ಸತತ 15 ವರ್ಷಗಳಿಂದ ರಾಜ್ಯದ ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆಯಾಗಿ ಆಳ್ವಾಸ್ ಗುರುತಿಸಿಕೊಂಡಿರುವುದು, ವಾರ್ಷಿಕ ಸುಮಾರು ₹80 ಕೋಟಿ ಮೌಲ್ಯದ ಸಮಾಜಮುಖಿ ಸೇವೆಗಳನ್ನು ನೀಡುತ್ತಿರುವುದನ್ನು ವಿವರಿಸಿದರು.
ಸಹಕಾರ ಇಲಾಖೆಯ ಸಹಕಾರ ಶಿಕ್ಷಣ ನಿಧಿಗೆ ₹3.62 ಲಕ್ಷದ ಚೆಕ್ಕನ್ನು ಮೂಡುಬಿದಿರೆ ಸಹಕಾರಿ ತರಬೇತಿ ಕೇಂದ್ರದ ಬಿಂದು ಅವರ ಮೂಲಕ ಸಲ್ಲಿಸಲಾಯಿತು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ತಲಾ ₹10 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. ಸಿ.ಎ. ಪರೀಕ್ಷೆಯಲ್ಲಿ ಟಾಪರ್ ಆಗಿರುವ ದೀಪಕ್ ಹೆಗ್ಡೆ, ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಧನಲಕ್ಷ್ಮಿ ಪೂಜಾರಿ ಪರವಾಗಿ ಪೋಷಕರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಮೋಹನ್ ಪಡಿವಾಳ್, ನಿರ್ದೇಶಕರಾದ ಕೆ. ಶ್ರೀಪತಿ ಭಟ್, ನಾರಾಯಣ ಪಿ.ಎಂ., ಜಯರಾಮ ಕೋಟ್ಯಾನ್, ವಿವೇಕ್ ಆಳ್ವ, ಮಹಮ್ಮದ್ ಶರೀಫ್, ಪ್ರಕಾಶಿನಿ ಹೆಗ್ಡೆ, ಪ್ರೋ. ಕುರಿಯನ್, ರಾಮಚಂದ್ರ ಮಿಜಾರು, ಅಶ್ವಿನ್ ಜೋಸ್ಸಿ ಪಿರೇರಾ, ಮೀನಾಕ್ಷಿ ಉಪಸ್ಥಿತರಿದ್ದರು. ಮೋಹನ್ ಪಡಿವಾಳ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ ವರದಿ ವಾಚಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಯರಾಮ ಕೋಟ್ಯಾನ್ ವಂದಿಸಿದರು.