ಮೂಡುಬಿದಿರೆ: ಅಶ್ವತ್ಥಪುರ–ಒಂಟಿಮಾರು–ಮುಚ್ಚೂರು ಸಂಪರ್ಕ ರಸ್ತೆಯ ಮಂಗೇಬೆಟ್ಟು ಪ್ರದೇಶದಲ್ಲಿರುವ ಕಿರು ಸೇತುವೆಗೆ ಬಿರುಕು ಕಾಣಿಸಿಕೊಂಡಿದ್ದು, ಅದರ ಒಂದು ಬದಿಯಲ್ಲಿ ಕುಸಿತವೂ ಉಂಟಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಗ್ರಾಮ ಪಂಚಾಯಿತಿ ಪ್ರಕಟಣೆ ಹೊರಡಿಸಿದೆ.
ಅಶ್ವತ್ಥಪುರದಿಂದ ಒಂಟಿಮಾರು ಮೂಲಕ ಮುಚ್ಚೂರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿರುವ ಮಂಗೇಬೆಟ್ಟು ಕಿರು ಸೇತುವೆ ಹಲವು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿದ್ದು, ಸಣ್ಣ ಪ್ರಮಾಣದ ವಾಹನಗಳ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿತ್ತು. ಆದರೆ ನೀರ್ಕೆರೆ ಸೇತುವೆ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಲ್ಲು, ಜಲ್ಲಿ ಸೇರಿದಂತೆ ಭಾರೀ ಸರಕು ಸಾಗಣೆ ಲಾರಿಗಳು ಈ ಮಾರ್ಗವನ್ನು ಪರ್ಯಾಯ ರಸ್ತೆಯಾಗಿ ಬಳಸುತ್ತಿವೆ. ಇದರಿಂದ ಹಳೆಯ ಕಿರು ಸೇತುವೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಮೊದಲು ಬಿರುಕು ಕಾಣಿಸಿಕೊಂಡಿತ್ತು.
ಸೇತುವೆಯ ಒಂದು ಬದಿಯಲ್ಲಿ ಕುಸಿತವೂ ಕಂಡುಬಂದಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮ ಪಂಚಾಯಿತಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಸಂಬಂಧಿತ ಇಲಾಖೆಯು ಸೇತುವೆಯ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ದುರಸ್ತಿ ಕಾಮಗಾರಿಯನ್ನು ಶೀಘ್ರ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.