ಮೂಡುಬಿದಿರೆ: ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಇಲ್ಲಿನ ಶ್ರೀ ಧವಳ ಕಾಲೇಜು, ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಶಿಕ್ಷಕರ ಸಂಘ (ಮುಕ್ತಾ) ಹಾಗೂ ಜಿ-ಟೆಕ್ ಕಂಪ್ಯೂಟರ್ ಎಜುಕೇಶನ್, ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ 'ಧವಳ ಡೆಸ್ಟಿನಿ-26' ಆವರಣ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು.
ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಅಭಿಜಿತ್ ಎಂ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು. ಧವಳ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಾರ್ಶ್ವನಾಥ ಅಜ್ರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಕ್ತಾ ಅಧ್ಯಕ್ಷ ಡಾ. ರವಿ ಎಂ.ಎನ್., ಮುಕ್ತಾ ಕಾರ್ಯದರ್ಶಿ ಡಾ. ಉದಯ ಶೆಟ್ಟಿ ಕೆ ಹಾಗೂ ಜಿ-ಟೆಕ್ ಕಂಪ್ಯೂಟರ್ ಎಜುಕೇಶನ್, ಮೂಡುಬಿದಿರೆ ಕೇಂದ್ರದ ನಿರ್ದೇಶಕ ಮಧುಸೂದನ್ ಶಿಂದೆ ಉಪಸ್ಥಿತರಿದ್ದರು. ಪ್ಲೇಸ್‌ಮೆಂಟ್ ಸೆಲ್ ಸಂಯೋಜಕ ರಾಹುಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉದ್ಯೋಗ ಮೇಳಕ್ಕೆ 760ಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 208 ಅಭ್ಯರ್ಥಿಗಳು ಎರಡನೇ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್‌ಲಿಸ್ಟ್ ಆಗಿದ್ದಾರೆ. ಅಂತಿಮ ಹಂತದಲ್ಲಿ 85ರಿಂದ 90ಕ್ಕೂ ಹೆಚ್ಚು ಅಭ್ಯರ್ಥಿಗಳು ವಿವಿಧ ಸಂಸ್ಥೆಗಳಲ್ಲಿ ನೇರ ನೇಮಕಾತಿಗೆ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ಉದ್ಯೋಗ ಮೇಳವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಉದ್ಯೋಗದ ಅವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಿದ್ದು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಅಭ್ಯರ್ಥಿಗಳ ಸಂದರ್ಶನ ನಡೆಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘಟಕರು ವಂದಿಸಿದರು.