ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಹಾಗೂ ಕೋಟೆಬಾಗಿಲಿನ ವೀರಮಾರುತಿ ದೇವಸ್ಥಾನದ ಜಂಟಿ ಆಶ್ರಯದಲ್ಲಿ ಆಟಿದ ಕೂಟ–2026 ಕಾರ್ಯಕ್ರಮ ಭಾನುವಾರ ವೀರಮಾರುತಿ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಕುಮಾರ್ ಹೆಗ್ಡೆ ಗುಂಡೂರಿ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಟಿ ದಿನಗಳ ಕಷ್ಟದ ಬದುಕು, ಆ ಕಾಲದ ಆಹಾರ ಪದ್ಧತಿ ಹಾಗೂ ತಿನಿಸುಗಳಲ್ಲಿರುವ ಔಷಧೀಯ ಗುಣಗಳನ್ನು ನೆನಪಿಸಿಕೊಂಡರು.
ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ ಮಾತನಾಡಿ, ಕೃಷಿ ಪರಂಪರೆಯಿಂದ ಬೆಳೆದು ಬಂದ ಸಮಾಜಕ್ಕೆ ಪರಿಸರವೇ ಜೀವನಾಡಿಯಾಗಿದ್ದು, ಅದರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್, ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ, ಕಾರ್ಯದರ್ಶಿ ಲತಾ ಯು. ಹೆಗ್ಡೆ, ಹೆಗ್ಗಡೆ ಸಮಾಜ ಸಂಘದ ಪದಾಧಿಕಾರಿಗಳು, ದೇವಸ್ಥಾನದ ಮೊಕ್ತೇಸರರು, ಸಂಘದ ವಿವಿಧ ವಲಯಗಳ ಅಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಆಟಿದ ಕೂಟದ ಸಿದ್ಧತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ದಯಾನಂದ ಹೆಗ್ಡೆ, ಹರೀಶ್ ಹೆಗ್ಡೆ, ರಾಜೇಶ್ ಹೆಗ್ಡೆ, ಜಯರಾಜ್ ಹೆಗ್ಡೆ, ಶ್ರೇಯಸ್ ಹೆಗ್ಡೆ ಹಾಗೂ ಮತ್ತಿತರರನ್ನು ಗೌರವಿಸಲಾಯಿತು. ದೇವಸ್ಥಾನದ ಕಾರ್ಯದರ್ಶಿ ಶುಭರಾಜ್ ಹೆಗ್ಡೆ ಸ್ವಾಗತಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಚೇತನಾ ರಾಜೇಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಹೆಗ್ಡೆ ವಂದಿಸಿದರು.
ಸಮಾಜದ ಸದಸ್ಯರು ಹಾಗೂ ಮಕ್ಕಳಿಂದ ಆಟಿ ಆಚರಣೆಯನ್ನು ನೆನಪಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಆಟಿ ತಿಂಗಳ ಸಂಪ್ರದಾಯ ಮತ್ತು ಅದರ ಮಹತ್ವವನ್ನು ಪರಿಚಯಿಸಲಾಯಿತು.