ಮೂಡುಬಿದಿರೆ: ಸಮಾಜದಿಂದ ಪ್ರತಿಯೊಬ್ಬರೂ ವಿವಿಧ ರೂಪಗಳಲ್ಲಿ ಉಪಕಾರವನ್ನು ಪಡೆಯುತ್ತಿದ್ದು, ಅದರ ಋಣ ತೀರಿಸಲು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪಡುಮಾರ್ನಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸುಮುಖ ಭಜನಾ ಮಂಡಳಿಯ ಗೌರವಾಧ್ಯಕ್ಷ ದಯಾನಂದ ಪೈ ಹೇಳಿದರು.

ಅಚ್ಚರಕಟ್ಟೆ ಪಡುಮಾರ್ನಾಡಿನಲ್ಲಿ ನಡೆದ ಸುಮುಖ ಭಜನಾ ಮಂಡಳಿಯ ವಿದ್ಯಾರ್ಥಿ ಮಕ್ಕಳಿಗೆ, ಪದಾಧಿಕಾರಿಗಳಿಗೆ ಹಾಗೂ ಪೋಷಕರಿಗೆ ಛತ್ರಿ ವಿತರಣಾ ಕಾರ್ಯಕ್ರಮ ಮತ್ತು ತಬಲಾ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಮ್ಮ ಕೊಡುಗೆಯಾಗಿ ನೀಡಿದ ಛತ್ರಿಗಳನ್ನು ವಿತರಿಸಿದ ದಯಾನಂದ ಪೈ, ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಶಾಲಾ ಶಿಕ್ಷಣದ ಜೊತೆಗೆ ಭಾರತೀಯ ಸನಾತನ ಸಂಸ್ಕೃತಿಯ ಕುಣಿತ ಭಜನಾ ಪರಂಪರೆಯನ್ನು ಮಕ್ಕಳಲ್ಲಿ ಬೆಳೆಸಲು ಪ್ರೋತ್ಸಾಹಿಸುತ್ತಿರುವ ಪೋಷಕರನ್ನು ಹಾಗೂ ಭಜನಾ ತರಬೇತಿದಾರ ದಯಾನಂದ ಪೈ ಅಭಿನಂದಿಸಿದರು.

ಸುಮುಖ ಭಜನಾ ಮಂಡಳಿಯ ಅಧ್ಯಕ್ಷೆ ಉಮಾವತಿ ಬಿ. ಬಂಗೇರ ತಮ್ಮ ಕೊಡುಗೆಯಾಗಿ ನೀಡಿದ ತಬಲಾವನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.

ಉಪಾಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ಕೃಷ್ಣಪ್ಪ ಪೆರ್ನಾಡ್ಕ, ಗೌರವ ಸಲಹೆಗಾರ ಪ್ರಮೋದ್ ಪೆರ್ನಾಡ್ಕ, ಭಜನಾ ಪರಿಷತ್ ಬೆಳುವಾಯಿ ವಲಯದ ಅಧ್ಯಕ್ಷ ಸದಾನಂದ ಕುಲಾಲ್, ಭಜನಾ ತರಬೇತಿದಾರರಾದ ಲಕ್ಷ್ಮಣ್ ನಾಯ್ಕ್ ಹಾಗೂ ಪ್ರವೀಣ್ ಸಾಲ್ಯಾನ್, ಖಜಾಂಚಿಗಳಾದ ಸುಪ್ರಿಯಾ ಮತ್ತು ಸ್ಮಿತಾ, ಗ್ರಾಮ ಪಂಚಾಯಿತಿ ಸದಸ್ಯ ನಿತಿನ್ ಕೋಟ್ಯಾನ್, ಸೌಮ್ಯ ಹಾಗೂ ಚೆಲುವಯ್ಯ ಪೂಜಾರಿ ಉಪಸ್ಥಿತರಿದ್ದರು.

ರವಿ ಮೂಲ್ಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸೌಮ್ಯ ವಂದಿಸಿದರು.