ಮೂಡುಬಿದಿರೆ: ಇಲ್ಲಿನ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಆಯೋಜಿಸಿರುವ 40ನೇ ವರ್ಷದ ಸಾಂಸ್ಕೃತಿಕ ಕಲಾಪಗಳ ಆಮಂತ್ರಣ ಪತ್ರಿಕೆಯನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಸಮಾಜ ಮಂದಿರದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಮಾನಾಥ ಎ. ಕೋಟ್ಯಾನ್, ಮೂಡುಬಿದಿರೆಯ ಮೊಸರು ಕುಡಿಕೆ ಉತ್ಸವ ಹಾಗೂ ಸಾರ್ವಜನಿಕ ಗಣೇಶೋತ್ಸವ ಜಿಲ್ಲೆಯಲ್ಲಿ ಮಾದರಿ ಉತ್ಸವಗಳಾಗಿ ಗುರುತಿಸಿಕೊಂಡಿದ್ದು, ಊರಿಗೆ ವಿಶೇಷ ಹೆಸರನ್ನು ತಂದುಕೊಟ್ಟಿವೆ ಎಂದು ಹೇಳಿದರು.

ಮಾಜಿ ಸಚಿವ ಹಾಗೂ ಸಂಘಟನೆಯ ಗೌರವಾಧ್ಯಕ್ಷ ಕೆ. ಅಭಯಚಂದ್ರ ಮಾತನಾಡಿ, ತಾವು ಶಾಸಕ ಹಾಗೂ ಸಚಿವರಾಗಿದ್ದ ಅವಧಿಯಲ್ಲಿ ಉತ್ಸವದ ನಿರ್ವಹಣೆಗೆ ಪೊಲೀಸ್ ಅಧಿಕಾರಿಗಳು ನೀಡಿದ ಸಹಕಾರವನ್ನು ಸ್ಮರಿಸಿದರು. ಈ ಪರಂಪರೆಯ ಉತ್ಸವ ಮುಂದಿನ ವರ್ಷಗಳಲ್ಲಿಯೂ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್, ಉದ್ಯಮಿಗಳಾದ ಪ್ರಭಾಚಂದ್ರ ಜೈನ್, ರಾಜೇಂದ್ರ ಕುಮಾರ್ ಜೈನ್, ಆರ್. ಕೆ. ಭಟ್, ಪೊನ್ನೆಚಾರಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಪಿ. ಅಶೋಕ ಕಾಮತ್ ಅತಿಥಿಗಳಾಗಿದ್ದರು.

ಸಂಘಟನೆಯ ಕಾರ್ಯದರ್ಶಿ ಸುಶಾಂತ್ ಕರ್ಕೇರಾ ಸ್ವಾಗತಿಸಿದರು. ಅಧ್ಯಕ್ಷ ಸಂತೋಷ್ ಕುಮಾರ್ ಅತಿಥಿಗಳನ್ನು ಗೌರವಿಸಿ, ಆಗಸ್ಟ್ 23ರಂದು 35ನೇ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆ ಹಾಗೂ ಸೆಪ್ಟೆಂಬರ್ 5ರಂದು ಸಾಂಸ್ಕೃತಿಕ ಕಲಾಪಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸಂಚಾಲಕ ಬಿ. ಸುರೇಶ್ ರಾವ್, ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕೋಶಾಧಿಕಾರಿ ಶಿವಾನಂದ ಶಾಂತಿ ವಂದಿಸಿದರು. ಗೌರವ ಸಲಹೆಗಾರ ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.