ಮೂಡುಬಿದಿರೆ: ಕಾಂತಾವರದ ಯಕ್ಷದೇಗುಲದ 24ನೇ ವಾರ್ಷಿಕ ಕಾರ್ಯಕ್ರಮ ಅಂಗವಾಗಿ ಜುಲೈ 26ರಂದು ಕಾಂತಾವರ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ 12 ತಾಸುಗಳ ಕಾಲ ‘ಯಕ್ಷೋಲ್ಲಾಸ 2026’ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಸುಮತಿ ಆರ್. ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಕಾಂತಾವರ ಯುವಸಂಗಮದ ಅಧ್ಯಕ್ಷ ವಿಜಯ ಸಾಲ್ಯಾನ್, ಬೇಲಾಡಿ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷ ಪ್ರಭಾಕರ ಕುಲಾಲ್ ಹಾಗೂ ಕೇಮಾರ್ ಯುವ ಉತ್ಸಾಹಿ ಬಳಗದ ಅಧ್ಯಕ್ಷ ಚಂದ್ರಹಾಸ ಜೈನ್ ಉಪಸ್ಥಿತರಿರುವರು. ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ಶುಭಾಶಂಸನೆ ನೀಡಲಿದ್ದಾರೆ.

ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಚಂದ್ರಾವಳಿ ವಿಲಾಸ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಪರಾಹ್ನ 2 ಗಂಟೆಯಿಂದ ಡಾ. ಜೀವಂಧರ್ ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮೂಡುಬಿದಿರೆಯ ಶ್ರೀಪತಿ ಭಟ್ ಹಾಗೂ ಕಾರ್ಕಳ ಯಕ್ಷಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಗೌರವ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಪುತ್ತೂರಿನ ದಿ. ಶ್ರೀಧರ ಭಂಡಾರಿ ಸ್ಮರಣಾರ್ಥ ಪೂಕಳ ಲಕ್ಷ್ಮೀನಾರಾಯಣ ಭಟ್ ಹಾಗೂ ಬಾಯಾರಿನ ದಿ. ಪ್ರಕಾಶ್ ಚಂದ್ರ ರಾವ್ ಸ್ಮರಣಾರ್ಥ ಬಾಯಾರು ರಮೇಶ್ ಶೆಟ್ಟಿ ಅವರಿಗೆ ‘ಯಕ್ಷದೇಗುಲ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

ಬಾರಾಡಿ ಫ್ರೆಂಡ್ಸ್‌ನ ಅಧ್ಯಕ್ಷ ಸನತ್ ಕುಮಾರ್ ಹಾಗೂ ಕಾಂತಾವರ ಗೆಳೆಯರ ಬಳಗದ ಅಧ್ಯಕ್ಷ ಆಶಿಕ್ ಸಾಲ್ಯಾನ್ ಉಪಸ್ಥಿತರಿರುವರು. ಬಳಿಕ ಪ್ರಸಿದ್ಧ ಕಲಾವಿದರಿಂದ ‘ಸುಧನ್ವಾರ್ಜುನ’ ತಾಳಮದ್ದಳೆ, ಕಾಂತಾವರ ಯಕ್ಷಬಾಲಕರಿಂದ ‘ಮತ್ಸ್ಯಾವತಾರ’, ‘ವರಾಹವತಾರ’ ಹಾಗೂ ‘ಮಾರಣಾದ್ವರ’ ಬಯಲಾಟ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.