ಮೂಡುಬಿದಿರೆ: ಕೃಷಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಕುಪ್ಪೆಪದವು ಕಾವೇರಿ ಆಂಗ್ಲಮಾಧ್ಯಮ ಶಾಲೆಯ 180 ವಿದ್ಯಾರ್ಥಿಗಳು ಇರುವೈಲಿನ ದಿಡ್ಡು ಧರ್ಮರಸು ಉಳ್ಳಾಯ ಕೊಡಮಣಿತ್ತಾಯ ಮೂಲ ದೈವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಮಂಗಳವಾರ ನೇಜಿ ನಾಟಿಯಲ್ಲಿ ಪಾಲ್ಗೊಂಡು ಕೃಷಿ ಪಾಠ ಕಲಿತರು.

ಮೂಡುಬಿದಿರೆ: ಕೃಷಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಕುಪ್ಪೆಪದವು ಕಾವೇರಿ ಆಂಗ್ಲಮಾಧ್ಯಮ ಶಾಲೆಯ 180 ವಿದ್ಯಾರ್ಥಿಗಳು ತಾಲೂಕಿನ ಇರುವೈಲಿನ ದಿಡ್ಡು ಧರ್ಮರಸು ಉಳ್ಳಾಯ ಕೊಡಮಣಿತ್ತಾಯ ಮೂಲ ದೈವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಮಂಗಳವಾರ ನೇಜಿ ನಾಟಿಯಲ್ಲಿ ಪಾಲ್ಗೊಂಡು ಕೃಷಿ ಪಾಠ ಕಲಿತರು.

ಕಾರ್ಯಕ್ರಮವನ್ನು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವಲೇರಿಯನ್ ಕುಟಿನ್ಹಾ ದೀಪ ಬೆಳಗಿಸಿ ಉದ್ಘಾಟಿಸಿ, ಹಿಂದಿನ ಕಾಲದಲ್ಲಿ ಜನರು ತಾವೇ ಭತ್ತ ಬೆಳೆದು ಅಕ್ಕಿ ಉತ್ಪಾದಿಸುತ್ತಿದ್ದರು. ಭತ್ತ ಬೆಳೆಯಲು ಅಪಾರ ಶ್ರಮ ಅಗತ್ಯ. ಇಂದು ಗದ್ದೆಗಳು ಅಡಿಕೆ ತೋಟಗಳಾಗಿ ಪರಿವರ್ತನೆಯಾಗುತ್ತಿರುವುದು ಬೇಸರದ ಸಂಗತಿ. ಕೃಷಿಕರ ಪರಿಶ್ರಮವನ್ನು ವಿದ್ಯಾರ್ಥಿಗಳು ನೇರವಾಗಿ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದರು.

ಕೃಷಿಕ ಪ್ರಸಾದ್ ಶೆಟ್ಟಿ ಮಾತನಾಡಿ, ಕೃಷಿ ಸುಲಭದ ಕೆಲಸವಲ್ಲ. ಬೆಳಿಗ್ಗೆಯಿಂದಲೇ ಗದ್ದೆಯಲ್ಲಿ ದುಡಿದು ಬೆಳೆ ಬೆಳೆಸಬೇಕಾಗುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕೃಷಿಯ ಮಹತ್ವವನ್ನೂ ಅರಿತುಕೊಳ್ಳಬೇಕು. ಮುಂದಿನ ಪೀಳಿಗೆಯೇ ಕೃಷಿಯನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಶಾಲಾ ಮುಖ್ಯಶಿಕ್ಷಕಿ ಶಾಲೆಟ್ ವಾಸ್ ಮಾತನಾಡಿ, ತರಗತಿಯ ನಾಲ್ಕು ಗೋಡೆಗಳ ಆಚೆಗಿನ ಬದುಕನ್ನು ವಿದ್ಯಾರ್ಥಿಗಳು ಅರಿಯಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಕೃಷಿಕರ ಜೀವನ, ಭತ್ತ ನಾಟಿ, ಗ್ರಾಮೀಣ ಸಂಸ್ಕೃತಿಯ ಅನುಭವ ಮಕ್ಕಳಿಗೆ ದೊರಕುವಂತೆ ಶಾಲಾ ಪೋಷಕ ಪ್ರಭಾಕರ ಪೂಜಾರಿ ದಿಡ್ಡು ಅವರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಮಣ್ಣಿನೊಂದಿಗೆ ಬೆರೆಯುವುದರಿಂದ ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಪ್ರೀತಿ ಬೆಳೆಯುತ್ತದೆ. ಅಕ್ಕಿ ಹೇಗೆ ಉತ್ಪಾದನೆಯಾಗುತ್ತದೆ ಎಂಬ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ," ಎಂದು ಗದ್ದೆಯ ಮಾಲೀಕ ಪ್ರಭಾಕರ ಪೂಜಾರಿ ದಿಡ್ಡು ಹೇಳಿದರು.

ಹಿರಿಯ ಯಮುನಾ ಮಜ್ಜಿಗುರಿ ಪಾರ್ದನ ಹಾಡಿನ ಮೂಲಕ ಭತ್ತ ನಾಟಿಯ ಸಂಪ್ರದಾಯವನ್ನು ಪರಿಚಯಿಸಿದರು. ಯಮುನಾ ಹಾಡಿದ ಪಾಡ್ದನಕ್ಕೆ ವಿದ್ಯಾರ್ಥಿಗಳು "ಓ ಬೇಲೆ" ಎಂದು ಧ್ವನಿಗೂಡಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಗದ್ದೆಗೆ ಇಳಿದು ನೇಜಿ ನಾಟಿಯಲ್ಲಿ ಪಾಲ್ಗೊಂಡರು.

ವಿದ್ಯಾರ್ಥಿನಿಯರಾದ ಶರಣ್ಯ, ನೀಕ್ಷಾ ರಾಜ್ಯ ಸರ್ಕಾರ ರೈತರಿಗೆ ಬೆಳೆಗಳಿಗೆ ನ್ಯಾಯಯುತ ಬೆಲೆ, ಪ್ರಕೃತಿ ವಿಕೋಪದಿಂದಾಗುವ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದರು. ವಿದ್ಯಾರ್ಥಿಗಳಾದ ನಿಶಿತಾ, ನಿಶಾಂತ್ ರೈತರಿಗೆ ಉತ್ತಮ ನೀರಾವರಿ ಸೌಲಭ್ಯ, ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಹೈಕೋರ್ಟ್ ವಕೀಲ ಧನಂಜಯ ಶೆಟ್ಟಿ ದೊಡ್ಡಗುತ್ತು ವಿದ್ಯಾರ್ಥಿಗಳಿಗೆ ಊಟ, ಫಲಹಾರದ ವ್ಯವಸ್ಥೆ ಮಾಡಿದ್ದರು. ಧರ್ಮಣ ಪೂಜಾರಿ ಕುಕ್ಕಿಮಾರ್, ಲಕ್ಷ್ಮಣ ಮಜ್ಜಿಗುರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಅರಿವು ಹೊಂದಬೇಕು, ಕೃಷಿಯಲ್ಲಿ ಆಸಕ್ತಿ ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರಭಾಕರ ಪೂಜಾರಿ ದಿಡ್ಡು ಹದಗೊಳಿಸಿದ್ದ ತಮ್ಮ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯವನ್ನು ಕಲಿಯಲು ಅವಕಾಶ ಕಲ್ಪಿಸಿದ್ದರು. ಈವರೆಗೆ ಗದ್ದೆಗಿಳಿಯದಿದ್ದ ಹಲವು ಮಕ್ಕಳು ಹಿರಿಯರು ತೋರಿಸಿದಂತೆ ನೇಜಿ ನೆಟ್ಟು ಮಧ್ಯಾಹ್ನದವರೆಗೆ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು. ಮಧ್ಯಾಹ್ನ ಬಳಿಕ ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನೂ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.