ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ-169ರ ಸಾಣೂರು–ಬಿಕರ್ನಕಟ್ಟೆ ಚತುಷ್ಪಥ ಕಾಮಗಾರಿಯ ಭಾಗವಾಗಿ ಬನ್ನಡ್ಕ ಪ್ರದೇಶದಲ್ಲಿ ಬಹುಕಾಲದಿಂದ ಸಾರ್ವಜನಿಕರು ಆಗ್ರಹಿಸುತ್ತಿದ್ದ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಾತ್ವಿಕ ಅನುಮೋದನೆ ನೀಡಿದೆ. ಈ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು ₹5.83 ಕೋಟಿ ವೆಚ್ಚ ನಿಗದಿಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಬನ್ನಡ್ಕದಲ್ಲಿ ಸುಮಾರು 700 ಮೀಟರ್ ಉದ್ದದ ಸರ್ವೀಸ್ ರಸ್ತೆ, ಚರಂಡಿ ನಿರ್ಮಾಣ ಹಾಗೂ ಬಾಕ್ಸ್ ಕಲ್ವರ್ಟ್‌ಗಳ ಅಗಲೀಕರಣ ಕಾಮಗಾರಿಗೆ ಸುಮಾರು ₹4.12 ಕೋಟಿ ವೆಚ್ಚ ಮೀಸಲಾಗಿದೆ. ಇದರೊಂದಿಗೆ ವಾಮಂಜೂರು ಸಮೀಪ ಸುಮಾರು ₹1.70 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಕೂಡ ಅನುಮೋದನೆ ದೊರೆತಿದೆ. ಇದರಿಂದ ವಾಮಂಜೂರು ಚರ್ಚ್, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ಸುರಕ್ಷಿತವಾಗಿ ರಾಷ್ಟ್ರೀಯ ಹೆದ್ದಾರಿ ದಾಟಲು ಅನುಕೂಲವಾಗಲಿದೆ. ಈ ಕಾಮಗಾರಿಗಳ ಅನುಷ್ಠಾನಕ್ಕಾಗಿ ಚತುಷ್ಪಥ ಯೋಜನೆಯ ಗುತ್ತಿಗೆ ಸಂಸ್ಥೆಯಾದ ದಿಲೀಪ್ ಬಿಲ್ಡ್‌ಕಾನ್‌ಗೆ ಎನ್‌ಎಚ್‌ಎಐ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕೃತ ಸೂಚನೆ ನೀಡಿದೆ. ಅಂತಿಮ ಆಡಳಿತಾತ್ಮಕ ಅನುಮೋದನೆ (COS) ನೀಡಲು ಅಗತ್ಯವಾದ ಸವಿವರ ಅಂದಾಜು ವೆಚ್ಚ ಹಾಗೂ ತಾಂತ್ರಿಕ ವಿನ್ಯಾಸಗಳನ್ನು ಶೀಘ್ರ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ತಾಂತ್ರಿಕ ಪರಿಶೀಲನೆ ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ.

ಬನ್ನಡ್ಕದಲ್ಲಿ ಸರ್ವೀಸ್ ರಸ್ತೆ ಇಲ್ಲದ ಕಾರಣ ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರೊಂದಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಸ್ಥಳ ಪರಿಶೀಲನೆ ನಡೆಸಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಪ್ರಾಧಿಕಾರವು ಇದೀಗ ತಾತ್ವಿಕ ಅನುಮೋದನೆ ನೀಡಿದ್ದು, ಸ್ಥಳೀಯರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದಂತಾಗಿದೆ ಎಂದು ಸಂಸದರು ತಿಳಿಸಿದ್ದಾರೆ.