ಮೂಡುಬಿದಿರೆ: ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್‌ಐಸಿಎಮ್) ಬೆಂಗಳೂರು ಮತ್ತು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ, ಮಂಗಳೂರು ಇವರ ಸಮನ್ವಯದಲ್ಲಿ ನಡೆಸಲಾಗುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮದ 9ನೇ ಬ್ಯಾಚ್ ಹಾಗೂ 74 ಮತ್ತು 75ನೇ ಅಧಿವೇಶನದ ಉದ್ಘಾಟನಾ ಸಮಾರಂಭವು ಭಾನುವಾರ ಪಡೀಲ್‌ನ ಆತ್ಮಶಕ್ತಿ ಸೌಧದಲ್ಲಿ ನಡೆಯಿತು.
ಶಿಕ್ಷಣಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಫಾರ್ ಕೋ-ಆಪರೇಟಿವ್ ಟ್ರೈನಿಂಗ್ (ಎನ್‌ಸಿಸಿಟಿ) ಅಂಗಸಂಸ್ಥೆಯಾದ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು ನಡೆಸುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ ತರಬೇತಿಯನ್ನು ಕಳೆದ ಹತ್ತು ವರ್ಷಗಳಿಂದ ಮಂಗಳೂರನ್ನು ಕೇಂದ್ರವಾಗಿಸಿಕೊಂಡು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಹಕಾರಿಗಳಿಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ನಿರಂತರವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಹಕಾರ ಸಂಘಗಳ ಸಿಬ್ಬಂದಿ ನೇಮಕಾತಿ ಹಾಗೂ ಪದೋನ್ನತಿ ಪ್ರಕ್ರಿಯೆಯಲ್ಲಿ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿದೆ. ಈಗಾಗಲೇ ಸುಮಾರು 1,000ಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ಈ ತರಬೇತಿ ಪೂರ್ಣಗೊಳಿಸಿದ್ದು, 500ಕ್ಕೂ ಹೆಚ್ಚು ಮಂದಿ ಪದೋನ್ನತಿ ಹೊಂದಿದ್ದಾರೆ. 40ಕ್ಕೂ ಹೆಚ್ಚು ಮಂದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಪದೋನ್ನತಿ ಪಡೆದಿದ್ದಾರೆ ಎಂದು ಹೇಳಿದರು.
ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು ತರಬೇತಿ ಸಮನ್ವಯ ಅಧಿಕಾರಿ ಹಾಗೂ ಉಪನ್ಯಾಸಕರಾಗಿದ್ದ ಸುರೇಶ್ ಪಿ.ಎನ್. ಅವರು ಸಂಸ್ಥೆಯ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
74 ಮತ್ತು 75ನೇ ಅಧಿವೇಶನಕ್ಕೆ ವಿವಿಧ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸೇರಿದಂತೆ ಒಟ್ಟು 101 ಶಿಕ್ಷಣಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ಆರ್‌ಐಸಿಎಮ್ ಬೆಂಗಳೂರು ತರಬೇತಿ ಸಮನ್ವಯ ಅಧಿಕಾರಿ ಹಾಗೂ ಉಪನ್ಯಾಸಕ ಜಯಪ್ರಕಾಶ್ ಎಂ. ಮತ್ತು ಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.