ಮೂಡುಬಿದಿರೆ: ಪುಸ್ತಕಗಳು ಕೇವಲ ಜ್ಞಾನದ ಮೂಲವಲ್ಲ, ವ್ಯಕ್ತಿಯ ಆತ್ಮವಿಶ್ವಾಸ, ಚಿಂತನಾ ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯಾಗಿವೆ ಎಂದು ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಹೇಳಿದರು.

ಕ್ರಿಯೇಟಿವ್ ಸಂಸ್ಥೆಯ ಆಶ್ರಯದಲ್ಲಿ ಪುಸ್ತಕ ಮನೆ ವತಿಯಿಂದ ಆಯೋಜಿಸಲಾದ ಕ್ರಿಯೇಟಿವ್ ಪುಸ್ತಕ ಧಾರೆ–2026ರ ಮೂರನೇ ಆವೃತ್ತಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಡಿಜಿಟಲ್ ಮಾಧ್ಯಮಗಳು ಮಾಹಿತಿ ನೀಡಬಹುದು. ಆದರೆ ಬದುಕಿನ ಅನುಭವ, ಮೌಲ್ಯಗಳು ಮತ್ತು ಚಿಂತನೆಯ ಆಳವನ್ನು ನೀಡುವ ಶಕ್ತಿ ಪುಸ್ತಕಗಳಿಗಷ್ಟೇ ಇದೆ. ಇಂದಿನ ಯುವಜನತೆ ಓದುವ ಅಭ್ಯಾಸವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಹೇಳಿದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವತ್ ಎಸ್. ಎಲ್. ಮಾತನಾಡಿ, ಹೊಸ ಬರಹಗಾರರಿಗೆ ಅವಕಾಶ ಕಲ್ಪಿಸುವುದು ಹಾಗೂ ಹಿರಿಯ ಬರಹಗಾರರ ಕೃತಿಗಳನ್ನು ಓದುಗರಿಗೆ ತಲುಪಿಸುವ ಉದ್ದೇಶದಿಂದ ಪುಸ್ತಕ ಮನೆ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 104 ಕೃತಿಗಳನ್ನು ಪ್ರಕಟಿಸಿದ್ದು, ಯುವ ಮನಸುಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಅಜಿತ್ ಹನುಮಕ್ಕನವರ್, ವ್ಯಕ್ತಿಯ ಮಾತಿನಲ್ಲಿ ವಿಷಯದ ಆಳ ಮತ್ತು ಶಬ್ದಭಂಡಾರ ಇದ್ದಾಗ ಆತ್ಮವಿಶ್ವಾಸ ಮೂಡುತ್ತದೆ. ಆ ಸಾಮರ್ಥ್ಯವನ್ನು ಬೆಳೆಸುವುದು ಪುಸ್ತಕಗಳ ಮೂಲಕವೇ ಸಾಧ್ಯ. ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವುದಲ್ಲ; ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಬಳಸುವುದನ್ನು ಕಲಿಯುವುದಾಗಿದೆ ಎಂದು ಅಭಿಪ್ರಾಯಪಟ್ಟರು.

25 ಕೃತಿಗಳ ಲೋಕಾರ್ಪಣೆ ಪುಸ್ತಕ ಮನೆ ವತಿಯಿಂದ ಹೊಸ ಪಟ್ಟಣ, ಖ್ಯಾತ ಶಿಕ್ಷಣ ಸಿದ್ಧಾಂತಿಗಳು, ಪೀಯೂಷಾಬೃತಮೃತ, ಸುಭಾಷಿತ ಸಾಗರ, ಬದುಕಿನ ಕನ್ನಡಿಯಲ್ಲಿ, ಭಾವಮುದ್ರೆ, ದೇವಯಾನ, ತರ್ಕಕ್ಕೆ ನಿಲುಕದ್ದು, ಸಮುದ್ರ ಮಾತಾಡಿತು, ನಿತ್ಯದ ನೋಟಗಳಿಗೆ ನಿರುತ್ತರ, ಅಪ್ಪನ ಅಂಗಡಿ, ಚಿಗುರು ಚಿಗುಟಿದ ಫೇಸ್‌ಬುಕ್, ಗೆಲುವಿನ ದಾರಿ, ನದಿಯಂಚಿನ ನಡಿಗೆ, ಚಂದನವ ಕಡಿದು ತೇದೊಡೆ, ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು, ಮೌನ ಈ ಮಳೆಬಿಲ್ಲು, ನಂಬಿಕೆ, ಗೆಲುವಿನ ಏಣಿ, ಅಂತರಂಗ ಯಾನ, ಮೌಲ್ಯದ ಅರಿವಿನ ಹೊಂಬೆಳಕು, ನೀಲಿ, ಒಲವೇ ಹಾಡಾಗಿದೆ, ಸಾಹಿತ್ಯ ವಿಸ್ಮಯ ಹಾಗೂ ರಣರಂಗ ಸೇರಿದಂತೆ 25 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಶಿಧರ್ ಹಾಲಾಡಿ ಅವರ 'ನದಿ ದಾಟಿ ಬಂದವರು' ಕೃತಿಗೆ ಉತ್ತಮ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಕ್ಷ ಧನಂಜಯ್ ಕುಂಬ್ಳೆ, ಶಿಕ್ಷಣ ತಜ್ಞ ಮಹಾಬಲೇಶ್ವರ ರಾವ್, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಆದರ್ಶ ಎಂ. ಕೆ., ಗಣನಾಥ ಶೆಟ್ಟಿ, ಗಣಪತಿ ಭಟ್ ಕೆ. ಎಸ್., ವಿಮಲ್ ರಾಜ್ ಹಾಗೂ ಅಮೃತ್ ಯು. ರೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲೋಹಿತ್ ಎಸ್. ಕೆ. ನಿರೂಪಿಸಿದರು.

'ಯುವಶಕ್ತಿ ಸಾಹಿತ್ಯ ಮತ್ತು ಮಾಧ್ಯಮ: ರಾಷ್ಟ್ರೀಯತೆಯ ಹೊಸ ಆಯಾಮಗಳು' ವಿಷಯದ ಕುರಿತು ಅಜಿತ್ ಹನುಮಕ್ಕನವರ್ ಅವರೊಂದಿಗೆ ಅವಿನಾಶ್ ಕಾಮತ್ ಸಂವಾದ ನಡೆಸಿದರು. ನಂತರ ಕನ್ನಡದ ಕವಿಶ್ರೇಷ್ಠರ ಅಮರ ಗೀತೆಗಳ ಸಂಗೀತಯಾನ 'ಭಾವ ನಮನ' ನಡೆಯಿತು. ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕಾರ್ಕಳದ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.