ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಾಬ್ದಾರಿಯ ಪ್ರಜ್ಞೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವಲ್ಲಿ ಶಾಲಾ ಸಂಸತ್ತು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ನಿರ್ದೇಶಕ ರವೀಂದ್ರ ಪುತ್ತೂರು ಹೇಳಿದರು.
ಕಲ್ಲಬೆಟ್ಟುವಿನ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ನೂತನ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲಾ ಸಂಸತ್ತು ಕೇವಲ ಹುದ್ದೆಗಳನ್ನು ನೀಡುವ ಕಾರ್ಯಕ್ರಮವಲ್ಲ; ಭವಿಷ್ಯದ ಉತ್ತಮ ನಾಯಕರು, ಜವಾಬ್ದಾರಿಯುತ ನಾಗರಿಕರು ಹಾಗೂ ಸಮಾಜಮುಖಿ ವ್ಯಕ್ತಿತ್ವಗಳನ್ನು ರೂಪಿಸುವ ಪ್ರಜಾಪ್ರಭುತ್ವದ ಪಾಠಶಾಲೆಯಾಗಿದೆ ಎಂದು ತಿಳಿಸಿದರು.
ಶಾಲಾ ಸಂಸತ್ತಿನ ಮೂಲಕ ವಿದ್ಯಾರ್ಥಿಗಳು ನಾಯಕತ್ವ, ಶಿಸ್ತು, ಸಮಯಪಾಲನೆ, ಸೇವಾ ಮನೋಭಾವ ಹಾಗೂ ಜವಾಬ್ದಾರಿಯ ಗುಣಗಳನ್ನು ಅಳವಡಿಸಿಕೊಳ್ಳುತ್ತಾರೆ. ಇಂತಹ ಮೌಲ್ಯಗಳು ಮುಂದಿನ ದಿನಗಳಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ನಾಯಕತ್ವ ಪ್ರದರ್ಶಿಸಲು ನೆರವಾಗುತ್ತವೆ. ದೇಶದ ಅಭಿವೃದ್ಧಿಗೆ ಮೌಲ್ಯಾಧಾರಿತ ನಾಯಕತ್ವ ಅಗತ್ಯವಾಗಿದ್ದು, ಲಾಲ್ ಬಹದ್ದೂರ್ ಶಾಸ್ತ್ರಿಯವರ ಬದ್ಧತೆ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ನಮ್ಮ ಮೌಲ್ಯಗಳು, ಯೋಚನೆಗಳು ಹಾಗೂ ಕಾರ್ಯಗಳಿಗೆ ಗೌರವ ನೀಡಿದಾಗ ಹೆಮ್ಮೆಯ ಭಾರತದ ರಾಯಭಾರಿಗಳಾಗಲು ಸಾಧ್ಯ ಎಂದು ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಶಿಕ್ಷಣದ ಜೊತೆಗೆ ಸಂಸ್ಕಾರ, ನೈತಿಕ ಮೌಲ್ಯಗಳು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ನಾಯಕತ್ವ ಬೆಳೆಸುವ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಹುದ್ದೆಯನ್ನು ಅಧಿಕಾರದ ಸಂಕೇತವಾಗಿ ಅಲ್ಲ, ಸೇವೆಯ ಅವಕಾಶವಾಗಿ ಪರಿಗಣಿಸಿ ಸಹಪಾಠಿಗಳ ಸಮಸ್ಯೆಗಳಿಗೆ ಸ್ಪಂದಿಸಿ, ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ ಶಾಲೆಯ ಶಿಸ್ತು, ಸ್ವಚ್ಛತೆ ಹಾಗೂ ಉತ್ತಮ ವಾತಾವರಣ ಕಾಪಾಡುವಲ್ಲಿ ಮುಂದಾಳತ್ವ ವಹಿಸಬೇಕು ಎಂದು ಕರೆ ನೀಡಿದರು. ವಿವಿಧ ಜಿಲ್ಲೆಗಳಿಂದ ಶಿಕ್ಷಣಕ್ಕಾಗಿ ಬಂದಿರುವ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮರೆಯಬಾರದು ಎಂದೂ ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಅದನ್ನು ಸೂಕ್ತ ವ್ಯಕ್ತಿಗೆ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ನಾಯಕರನ್ನು ಮಾದರಿಯಾಗಿ ತೆಗೆದುಕೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪೋಷಕರ ಕಷ್ಟವನ್ನು ಅರಿತವರು ತಪ್ಪು ದಾರಿ ಹಿಡಿಯುವುದಿಲ್ಲ. ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವದಿಂದ ನಿರ್ವಹಿಸಿ ಶಾಲೆಗೆ ಉತ್ತಮ ಹೆಸರು ತರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ, ಶಾಲಾ ಸಂಸತ್ ಸದಸ್ಯರು ವಿದ್ಯಾರ್ಥಿಗಳ ಧ್ವನಿಯಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಸಾಮರ್ಥ್ಯವನ್ನು ಸಾಧನೆಗೆ ಪೂರಕವಾಗಿ ಬಳಸಿಕೊಂಡು ಶಿಸ್ತು, ಸಮಯಪಾಲನೆ ಹಾಗೂ ಸೇವಾ ಮನೋಭಾವದೊಂದಿಗೆ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್, ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ ಶ್ರೀಪ್ರಸಾದ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಉಪಮುಖ್ಯೋಪಾಧ್ಯಾಯ ಜಯಶೀಲ ಬೆಳ್ತಂಗಡಿ, ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಸಂಸತ್ತಿನ ನಾಯಕನಾಗಿ ಋಷಿಕೇಶ್ ಎ. ಮಿನಾಚೆ, ಉಪನಾಯಕನಾಗಿ ನಿಶಾಂತ್ ರಾಜ್, ಸ್ಪೀಕರ್ ಆಗಿ ನಿಹಾರಿಕ, ಶಿಕ್ಷಣ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಸಯ್ಯದಾ ಆನಂ, ಶಿಸ್ತು ಮಂತ್ರಿಯಾಗಿ ದೃಷ್ಠಿ, ಕ್ರೀಡಾ ಮಂತ್ರಿಯಾಗಿ ಚೇತನ್, ಜಲಶಕ್ತಿ ಮಂತ್ರಿಯಾಗಿ ಸಾನ್ವಿಕಾ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ತನ್ವಿ ಪೂಜಾರಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಹರೀಶ್ ಪೂಂಜಾ ಕಳುಹಿಸಿದ ಶುಭಾಶಯ ಸಂದೇಶವನ್ನು ಜಯಶೀಲ ಬೆಳ್ತಂಗಡಿ ವಾಚಿಸಿದರು. ರಶ್ಮಿ ಅತಿಥಿಗಳನ್ನು ಪರಿಚಯಿಸಿದರು. ಸ್ವರ್ಣಲತಾ ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು. ವನಿತಾ ಪ್ರತಿಜ್ಞಾವಿಧಿ ಬೋಧಿಸಿದರು. ಋಷಿಕೇಶ್, ದೃಷ್ಠಿ ಹಾಗೂ ತನ್ವಿ ಪೂಜಾರಿ ತಮ್ಮ ತಮ್ಮ ಜವಾಬ್ದಾರಿಗಳನ್ನು ವಾಚಿಸಿದರು. ಶಿವಪ್ರಸಾದ್ ಭಟ್ ಸ್ವಾಗತಿಸಿದರು. ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ನಿಹಾರಿಕ ವಂದಿಸಿದರು.