ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಹಾಗೂ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಂಧನವನ್ನು ವಿರೋಧಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಯಿತು. ನೀಟ್ ಪರೀಕ್ಷೆಯಲ್ಲಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ, ದೇಶದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ನೀಟ್ ಪರೀಕ್ಷೆಯ ಮೇಲೆ ಅವಲಂಬಿಸಿಕೊಂಡಿದ್ದು, ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದವರನ್ನು ಹತ್ತಿಕ್ಕುವ ಪ್ರಯತ್ನ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕರ ಬಂಧನವನ್ನು ತೀವ್ರವಾಗಿ ಖಂಡಿಸಿದ ಅವರು, ಪ್ರತಿಭಟನೆಯ ಧ್ವನಿಯನ್ನು ದಮನಿಸುವ ಯಾವುದೇ ಪ್ರಯತ್ನವನ್ನು ಜನರು ಒಪ್ಪುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೂ ನೀಟ್ ಪರೀಕ್ಷೆಯಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದರು. ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳ ಹೋರಾಟಕ್ಕೆ ಕಾಂಗ್ರೆಸ್ ನಿರಂತರ ಬೆಂಬಲ ನೀಡಲಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಪ್ರಮುಖರಾದ ಪದ್ಮಪ್ರಸಾದ್ ಜೈನ್, ರಾಜೇಶ್ ಕಡಲಕೆರೆ, ಸುರೇಶ್ ಪ್ರಭು, ಚಂದ್ರಹಾಸ ಸನಿಲ್,ರುಕ್ಕಯ್ಯ ಪೂಜಾರಿ,ಜೊಸ್ಸಿ ಮಿನೇಜಸ್, ರಮೇಶ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಇಕ್ಬಾಲ್ ಕರೀಮ್, ಟಿ.ಎನ್‌.ಕೆಂಬಾರೆ, ಸತೀಶ್ ಕೋಟ್ಯಾನ್, ರೆಕ್ಸನ್ ಪಿಂಟೊ, ಪ್ರವೀಣ್ ಇರುವೈಲ್, ಕುಮಾರ್ ಪೂಜಾರಿ, ಪ್ರದೀಪ್ ಇರುವೈಲ್, ದಿನೇಶ್ ಪ್ರಭು ಇರುವೈಲ್, ಪ್ರಶಾಂತ್ ಅಮೀನ್,ಸವಿತಾ ಟಿ.ಎನ್, ಸುಪ್ರಿಯಾ ಡಿ.ಶೆಟ್ಟಿ, ದಿಲೀಪ್ ಕುಮಾರ್ ಶೆಟ್ಟಿ, ವಾಸುದೇವ ನಾಯಕ್, ಹರೀಶ್ ಆಚಾರ್ಯ, ಪುರುಷೋತ್ತಮ ನಾಯಕ್,ಅನೀಶ್ ಡಿಸೋಜ,ಪಿ.ಕೆ.ಥೋಮಸ್, ಕೊರಗಪ್ಪ, ವಲೇರಿಯನ್ ಸಿಕ್ವೇರಾ, ಶೇಖರ್ ಬೊಳ್ಳಿ, ಸತೀಶ್ ಭಂಡಾರಿ,ಸುರೇಶ್ ಕೋಟ್ಯಾನ್, ವರುಣ್, ಲತೀಫ್,ಅಶ್ರಫ್ ಮರೋಡಿ, ಸಲಾಮ್ ಹೊಸಂಗಡಿ,ಗಣೇಶ್ ಶೆಟ್ಟಿ, ಶಾಬಾಝ್ ಬೆಳುವಾಯಿ, ಹಿಮಾಯತ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೈಸನ್ ಪಿರೇರಾ ಶಿರ್ತಾಡಿ ನಿರೂಪಿಸಿದರು.