ಮೂಡುಬಿದಿರೆ: ಜ್ಯೋತಿನಗರ ಸರ್ಕಾರಿ ಶಾಲೆಗೆ ಮೂಡುಬಿದಿರೆ ವಲಯದ ಗ್ಯಾರೇಜು ಮಾಲಕರ ಸಂಘದಿಂದ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಲಾಯಿತು.
ಸಂಘದ ಅಧ್ಯಕ್ಷ ಗುರುಪ್ರಸಾದ್ ಧ್ವನಿವರ್ಧಕ ಹಸ್ತಾಂತರಿಸಿ ಮಾತನಾಡಿ, ಸಂಘಟನೆ ಪ್ರತಿವರ್ಷ ಒಂದೊಂದು ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪದಾಧಿಕಾರಿಗಳ ಸಹಕಾರದಿಂದ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದರು. ವಿದ್ಯಾರ್ಥಿಗಳು ಸ್ಪಷ್ಟ ಗುರಿ, ದೃಢಸಂಕಲ್ಪ ಹಾಗೂ ಸೇವಾ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಿ, ಕುಟುಂಬ, ಶಾಲೆ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಗುರುಪ್ರಸಾದ್ ತಿಳಿಸಿದರು.
ಗ್ಯಾರೇಜು ಮಾಲಕರ ಸಂಘದ ಕೋಶಾಧಿಕಾರಿ ಶಂಕರ್ ಕೋಟ್ಯಾನ್ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದರು. ತಾವು ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿ ಇಂದು ಉದ್ಯಮಿಯಾಗಿ ಬೆಳೆದಿರುವುದನ್ನು ಉಲ್ಲೇಖಿಸಿದ ಅವರು, ರೋಟರಿ ಸಂಸ್ಥೆ ಮತ್ತು ಯುವವಾಹಿನಿ ಮೂಲಕ ಶಾಲೆಗೆ ವಿವಿಧ ಕೊಡುಗೆಗಳನ್ನು ನೀಡಿರುವುದನ್ನು ಸ್ಮರಿಸಿದರು. ಗ್ಯಾರೇಜು ಮಾಲಕರ ಸಂಘವು ಪ್ರತಿವರ್ಷ ಸರ್ಕಾರಿ ಶಾಲೆಗಳಿಗೆ ಪುಸ್ತಕಗಳು ಹಾಗೂ ಶೈಕ್ಷಣಿಕ ಉಪಕರಣಗಳನ್ನು ವಿತರಿಸುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಹಾರೈಸಿದರು.
ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಅಮೀನ್, ನಿಯೋಜಿತ ಅಧ್ಯಕ್ಷ ಸುಧೀರ್ ಭಟ್, ಪದಾಧಿಕಾರಿಗಳಾದ ಅಲ್ತಾಫ್, ಕುಮಾರ್, ಯಶವಂತ, ಸಂತೋಷ್, ಲೋಕೇಶ್, ವಾಸುದೇವ ಶೆಟ್ಟಿಗಾರ್, ಗಿರೀಶ್, ದಿನೇಶ್, ಮುಖ್ಯ ಶಿಕ್ಷಕಿ ಅಪೋಲಿಯನ್ ಮೊನಿಸ್ ಹಾಗೂ ಶಿಕ್ಷಕಿಯರಾದ ಸುನೀತಾ, ಗ್ರೇಸಿ ಡಿಸೋಜ, ಸೌಮ್ಯ, ಅಶ್ವಿನಿ, ಎಮಿಲಿನ್ ಉಪಸ್ಥಿತರಿದ್ದರು.
ನೂತನ ಧ್ವನಿವರ್ಧಕದ ಮೂಲಕ ನಡೆದ ಮೊದಲ ಕಾರ್ಯಕ್ರಮದಲ್ಲಿ ಧನಂಜಯ ಮೂಡುಬಿದಿರೆ ಸ್ವಯಂಪ್ರೇರಿತವಾಗಿ ದ. ರಾ. ಬೇಂದ್ರೆ ಅವರ 'ಮೂಡಲ ಮನೆಯಾ ಮುತ್ತಿನ ನೀರಿನ...' ಭಾವಗೀತೆ ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಧ್ವನಿವರ್ಧಕವನ್ನು ಸದ್ಬಳಕೆ ಮಾಡಿಕೊಂಡು ಸಭಾಭಯ ನಿವಾರಿಸಿಕೊಳ್ಳುವುದರ ಜೊತೆಗೆ ಸಾಹಿತ್ಯಾಸಕ್ತಿ, ಸ್ಪಷ್ಟ ಉಚ್ಚಾರಣೆ ಹಾಗೂ ಸ್ವರಮಾಧುರ್ಯ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.