ಮೂಡುಬಿದಿರೆ: ಐಬಿಎಂ ಸಾಫ್ಟ್‌ವೇರ್ ಲ್ಯಾಬ್ಸ್ ಸಹಯೋಗದಲ್ಲಿ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ಎಐಇಟಿ)ಯಲ್ಲಿ ದೇಶದ ಮೊದಲ ಐಬಿಎಂ ಎಐ ಲ್ಯಾಬ್‌ನ್ನು ಬುಧವಾರ ಉದ್ಘಾಟಿಸಲಾಯಿತು.

ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ಸ್ಥಾಪಿಸಲಾದ ಈ ಲ್ಯಾಬ್, ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ನೇರ ಪ್ರಾಯೋಗಿಕ ಅನುಭವ ಕಲ್ಪಿಸುವ ಮಹತ್ವದ ಕೇಂದ್ರವಾಗಲಿದೆ.

ಐಬಿಎಂ ವಾಟ್ಸನ್‌ಎಕ್ಸ್.ಎಐ, ವಾಟ್ಸನ್‌ಎಕ್ಸ್ ಆರ್ಕೆಸ್ಟ್ರೇಟ್ ಹಾಗೂ ಎಐ ಆಧಾರಿತ ಡೆವಲಪರ್ ಉಪಕರಣಗಳನ್ನು ಒಳಗೊಂಡಿರುವ ಈ ಲ್ಯಾಬ್ ಮೂಲಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎಂಟರ್‌ಪ್ರೈಸ್ ಎಐ ವೇದಿಕೆಗಳು ಹಾಗೂ ನೈಜ ಕೈಗಾರಿಕಾ ಅನ್ವಯಿಕೆಗಳ ಕುರಿತು ಪ್ರಾಯೋಗಿಕ ಜ್ಞಾನ ಪಡೆಯಲಿದ್ದಾರೆ.

ಐಬಿಎಂ ಇಂಡಿಯಾದ ವಾಟ್ಸನ್‌ಎಕ್ಸ್ ಎಐ ವಿಭಾಗದ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯಸ್ಥ ರತೀಶ್ ಮುರಳೀಧರನ್ ಮಾತನಾಡಿ, ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಸ್ಥಾಪಿಸಿದ ಎಂಜಿನಿಯರಿಂಗ್ ಕಾಲೇಜಾಗಿ ಆಳ್ವಾಸ್ ಹೊಸ ಮೈಲಿಗಲ್ಲು ನಿರ್ಮಿಸಿದೆ ಎಂದು ಹೇಳಿದರು. ಎಐ ತಂತ್ರಜ್ಞಾನವು ಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವ ಶಕ್ತಿಯುತ ಸಾಧನವಾಗಿದೆ. ಆದರೆ ಭವಿಷ್ಯದ ಯಶಸ್ಸು ಕೇವಲ ತಂತ್ರಜ್ಞಾನದಿಂದ ನಿರ್ಧಾರವಾಗುವುದಿಲ್ಲ. ಕಲಿಯುವ ಆಸಕ್ತಿ, ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ಸಮಾಜಕ್ಕೆ ಉಪಯುಕ್ತ ಪರಿಹಾರಗಳನ್ನು ಕಂಡುಹಿಡಿಯುವ ಮನೋಭಾವವೂ ಅಷ್ಟೇ ಮುಖ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕೃತಕ ಬುದ್ಧಿಮತ್ತೆಯನ್ನು ಮಾನವ ಸಾಮರ್ಥ್ಯವನ್ನು ವೃದ್ಧಿಸುವ ಸಾಧನವಾಗಿ ನೋಡಬೇಕು, ಅದು ಮಾನವನನ್ನು ಬದಲಿಸುವ ತಂತ್ರಜ್ಞಾನವಲ್ಲ ಎಂದು ಹೇಳಿದರು. ಮಾನವೀಯ ಸಾಮಾನ್ಯ ಜ್ಞಾನ ಮತ್ತು ಎಐ ಒಂದಾದಾಗ ಅತ್ಯುತ್ತಮ ಪರಿಹಾರಗಳನ್ನು ರೂಪಿಸಬಹುದು. ಜಾಗತೀಕರಣದಿಂದ ಇಂಟರ್‌ನೆಟ್ ಕ್ರಾಂತಿಯವರೆಗೆ ಪ್ರತಿಯೊಂದು ತಂತ್ರಜ್ಞಾನ ಬದಲಾವಣೆಯೂ ಉದ್ಯೋಗಗಳ ಸ್ವರೂಪವನ್ನು ಬದಲಾಯಿಸಿದೆ ಹೊರತು ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸಿಲ್ಲ. ಎಐ ಕೂಡ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಆದ್ದರಿಂದ ಶೈಕ್ಷಣಿಕ ಸಂಸ್ಥೆಗಳು ತಮ್ಮ ಪಠ್ಯಕ್ರಮಗಳನ್ನು ಕಾಲಾನುಗುಣವಾಗಿ ಪರಿಷ್ಕರಿಸಬೇಕು ಎಂದರು. ಈ ಐಬಿಎಂ ಎಐ ಲ್ಯಾಬ್ ಮುಂದಿನ ದಿನಗಳಲ್ಲಿ ನವೀನತೆ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಯ ಪ್ರಮುಖ ಕೇಂದ್ರವಾಗಿ ವಿದ್ಯಾರ್ಥಿಗಳನ್ನು ಎಐ ಆಧಾರಿತ ಭವಿಷ್ಯದ ಉದ್ಯೋಗಗಳಿಗೆ ಸಜ್ಜುಗೊಳಿಸಲಿದೆ ಎಂದು ಹೇಳಿದರು.

ಎಐಇಟಿಯ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಐಬಿಎಂ ಇಂಡಿಯಾದ ಎಐ ತಜ್ಞ ಮನೋಜ್ ಬಿ. ಶೆಟ್ಟಿ ವಿದ್ಯಾರ್ಥಿಗಳಿಗೆ ಎಐ ಕ್ಷೇತ್ರದ ಅವಕಾಶಗಳು ಮತ್ತು ತಂತ್ರಜ್ಞಾನ ಬೆಳವಣಿಗೆ ಕುರಿತು ಮಾರ್ಗದರ್ಶನ ನೀಡಿದರು.

ಎಐಇಟಿ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಐಬಿಎಂ ಸಾಫ್ಟ್‌ವೇರ್ ಲ್ಯಾಬ್ಸ್ ಪ್ರತಿನಿಧಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೊಠಾರಿ ಸ್ವಾಗತಿಸಿದರು. ರಕ್ಷಿತಾ ರೈ ಕಾರ್ಯಕ್ರಮ ನಿರೂಪಿಸಿದರು. ಸಂಪತ್ ಶೆಟ್ಟಿ ವಂದಿಸಿದರು.