ಮೂಡುಬಿದಿರೆ: ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮಾ ವೈರಸ್) ಲಸಿಕೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿರುವ ಎಚ್‌ಪಿವಿ ಸೋಂಕನ್ನು ತಡೆಗಟ್ಟುವಲ್ಲಿ ಎಚ್‌ಪಿವಿ ಲಸಿಕೆ ಅತ್ಯಂತ ಪರಿಣಾಮಕಾರಿ ಎಂದು ಮುಖ್ಯ ಅತಿಥಿಯಾಗಿದ್ದ ಡಾ. ಅಕ್ಷತಾ ನಾಯಕ್ ತಿಳಿಸಿದರು.

2006ರಿಂದ ಬಳಕೆಯಲ್ಲಿರುವ ಎಚ್‌ಪಿವಿ ಲಸಿಕೆಯು ವೈರಸ್ ಸೋಂಕಿನಿಂದ ದೇಹವನ್ನು ರಕ್ಷಿಸುವ ಮೂಲಕ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹೆಣ್ಣು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಲಸಿಕೆಯನ್ನು ಸರ್ಕಾರದ ವತಿಯಿಂದ ಮೊದಲ ಬಾರಿಗೆ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿನಿಯೂ ಈ ಅವಕಾಶದ ಪ್ರಯೋಜನ ಪಡೆಯಬೇಕು ಎಂದು ಡಾ. ಅಕ್ಷತಾ ನಾಯಕ್, ಆಡಳಿತ ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ, ಮೂಡುಬಿದಿರೆ ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಅಕ್ಷತಾ ನಾಯಕ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಆರೋಗ್ಯವೇ ಜೀವನದ ಅಮೂಲ್ಯ ಸಂಪತ್ತು ಎಂಬ ಧ್ಯೇಯದೊಂದಿಗೆ ಎಕ್ಸಲೆಂಟ್ ಸಂಸ್ಥೆಯು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುತ್ತಿದೆ. ನಿಯಮಿತ ದೈಹಿಕ ವ್ಯಾಯಾಮ, ಆರೋಗ್ಯಕರ ಜೀವನಶೈಲಿ ಹಾಗೂ ಸ್ವಚ್ಛತೆ ಕುರಿತು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜೊತೆಗೆ, ಕೇಂದ್ರ ಸರ್ಕಾರದ ಎಚ್‌ಪಿವಿ ಲಸಿಕೆ ಕುರಿತು ವಿದ್ಯಾರ್ಥಿನಿಯರು ಮತ್ತು ಪೋಷಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಕೈಗೊಂಡಿದ್ದು, ಎಲ್ಲ ಅರ್ಹ ವಿದ್ಯಾರ್ಥಿನಿಯರೂ ಲಸಿಕೆಯ ಪ್ರಯೋಜನ ಪಡೆದು ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಸಂಪತ್ ಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ ಶ್ರೀಪ್ರಸಾದ್, ಸಿಬಿಎಸ್‌ಇ ಸಂಯೋಜಕಿ ವಿಮಲ ಶೆಟ್ಟಿ ಉಪಸ್ಥಿತರಿದ್ದರು. ಚಾರ್ವಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪೂರ್ವಿ ವಂದಿಸಿದರು.