ಮೂಡುಬಿದಿರೆ: ಇಲ್ಲಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರವೀಣ್ ಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ದೈಹಿಕ ಶಿಕ್ಷಕರ ಶಿಸ್ತು, ಘನತೆ ಮತ್ತು ಮೌಲ್ಯಾಧಾರಿತ ವೃತ್ತಿಜೀವನ ಎಲ್ಲರಿಗೂ ಮಾದರಿಯಾಗಲಿ ಎಂದು ಅವರು ಹಾರೈಸಿದರು.

ತಾಲೂಕು ದೈಹಿಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ಸುಧೀರ್ ಕುಮಾರ್, ಕಾರ್ಯದರ್ಶಿಯಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಳಿಯೂರಿನ ದೈಹಿಕ ಶಿಕ್ಷಕಿ ಶಾಂತಿ ಹಾಗೂ ಕೋಶಾಧಿಕಾರಿಯಾಗಿ ಬಾಬು ರಾಜೇಂದ್ರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರಶಾಂತ್ ಅಧಿಕಾರ ಸ್ವೀಕರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ತಿಲಕಾ ಅನಂತವೀರ ಜೈನ್, ಅನುದಾನರಹಿತ ಶಾಲೆಯಿಂದ ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಸುಧೀರ್ ಕುಮಾರ್ ಹಾಗೂ ಅವರ ತಂಡಕ್ಕೆ ಶುಭ ಹಾರೈಸಿದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಿತೇಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು. ಇಲಾಖೆ ನಡೆಸುವ ಕ್ರೀಡಾ ಪಂದ್ಯಾಟಗಳ ಸಂಘಟನೆಯಲ್ಲಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಹಾಗೂ ಶಿಕ್ಷಕರು ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ರಿತೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಧೀರ್ ಕುಮಾರ್ ಅವರನ್ನು ಇಲಾಖೆಯ ವತಿಯಿಂದ ಗೌರವಿಸಲಾಯಿತು.

ಸುಧೀರ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಸಂಘದ ಸದಸ್ಯರು ಹಾಗೂ ಇತರ ಸಂಘಟನೆಗಳ ಸಹಕಾರದೊಂದಿಗೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ತಿಳಿಸಿದರು. ಶಾಂತಿ ವಂದಿಸಿದರು. ನವೀನ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.