ಮೂಡುಬಿದಿರೆ: ಅಮೃತಜಲ ಯೋಜನೆಯ ಪೈಪ್‌ಲೈನ್ ಅಳವಡಿಕೆಗಾಗಿ ಅಗೆದ ರಸ್ತೆಗಳಿಗೆ ನಡೆಸಲಾಗಿರುವ ಕಳಪೆ ತೇಪೆ ಕಾಮಗಾರಿ ವಿರುದ್ಧ ಮೂಡುಬಿದಿರೆಯಲ್ಲಿ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದ್ದು, ಕಾಮಗಾರಿ ನಡೆಸಿದವರ ವಿರುದ್ಧ ಕ್ರಮ ಕೈಗೊಂಡು ರಸ್ತೆಗಳನ್ನು ಗುಣಮಟ್ಟದೊಂದಿಗೆ ಮರುನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಜ್ಯೋತಿನಗರ ಸಮೀಪದ ರತನ್ ಗ್ಯಾರೇಜ್ ಬಳಿ ಬುಧವಾರ ಆಟೋರಿಕ್ಷಾ ಪಲ್ಟಿಯಾಗಿ ಸವಾರರೊಬ್ಬರು ಮೃತಪಟ್ಟ ಘಟನೆ ಬಳಿಕ ರಸ್ತೆ ದುರಸ್ತಿಯ ಗುಣಮಟ್ಟ ಮತ್ತೊಮ್ಮೆ ಪ್ರಶ್ನೆಗೆ ಗುರಿಯಾಗಿದೆ.

ಕಳಪೆ ಕಾಮಗಾರಿಗೆ ಆಕ್ರೋಶ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಗಳನ್ನು ವೈಜ್ಞಾನಿಕವಾಗಿ, ಸಮರ್ಪಕವಾಗಿ ಮರುನಿರ್ಮಿಸದೆ ಕೇವಲ ಮೇಲ್ಮೈ ತೇಪೆ ಹಾಕಿ ಬಿಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆ ಬಂದಾಗ ರಸ್ತೆಗಳು ಮತ್ತಷ್ಟು ಹಾಳಾಗುತ್ತಿದ್ದು, ಹಲವು ಪೈಪ್‌ಲೈನ್‌ಗಳಿಂದ ನೀರು ಸೋರಿಕೆಯಾಗುತ್ತಿರುವುದರಿಂದ ರಸ್ತೆ ಕುಸಿಯುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

ರಸ್ತೆಯ ಕಳಪೆ ಸ್ಥಿತಿಯ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ದೂರಿಗೆ ಸಮಯೋಚಿತವಾಗಿ ಸ್ಪಂದಿಸಿದ್ದರೆ ಅಮೂಲ್ಯ ಜೀವವೊಂದನ್ನು ಉಳಿಸಬಹುದಾಗಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

"ಅಮೃತಜಲ ಯೋಜನೆಯಡಿ ಅಗೆದ ರಸ್ತೆಗಳನ್ನು ಸಂಪೂರ್ಣವಾಗಿ ಗುಣಮಟ್ಟದ ಕಾಮಗಾರಿಯೊಂದಿಗೆ ಮರುನಿರ್ಮಿಸಬೇಕು. ಕಳಪೆ ಕಾಮಗಾರಿಗೆ ಹೊಣೆಗಾರರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು." ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳು, ಸಾರ್ವಜನಿಕರಿಗೂ ಅಪಾಯ ಹದಗೆಟ್ಟ ರಸ್ತೆಗಳಿಂದ ವಾಹನ ಸವಾರರು ಮಾತ್ರವಲ್ಲದೆ ಇದೇ ಮಾರ್ಗದಲ್ಲಿ ಪ್ರತಿದಿನ ಸಂಚರಿಸುವ ನೂರಾರು ವಿದ್ಯಾರ್ಥಿಗಳು, ಪಾದಚಾರಿಗಳು ಅಪಾಯದ ನಡುವೆ ಓಡಾಡುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

"ಯೂನಿಯನ್ ಬ್ಯಾಂಕ್, ಸ್ಥಳೀಯ ಹೋಟೆಲ್ ಮುಂಭಾಗದ ಅಪಾಯಕಾರಿ ತಿರುವುಗಳಲ್ಲಿ ವೈಜ್ಞಾನಿಕ ಹಂಪ್ಸ್ ಅಳವಡಿಸಿ ವಾಹನಗಳ ವೇಗ ನಿಯಂತ್ರಿಸಬೇಕು. ರಸ್ತೆ ಕಾಮಗಾರಿಯ ಗುಣಮಟ್ಟದ ತಾಂತ್ರಿಕ ಪರಿಶೀಲನೆ ನಡೆಸಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು." ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಶೇಷ ವರದಿ : ಯಶೋಧರ ವಿ. ಬಂಗೇರ