ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಪಾಡಿಕಲ್ಲಿನ ಪಿಎಫ್‌ಸಿ ಮೈದಾನದ ಸಮೀಪ ಸುಮಾರು 25 ಮನೆಗಳಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗುಂಡಿ-ಹೊಂಡಗಳಿಂದ ತುಂಬಿರುವ ರಸ್ತೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ನಿತ್ಯ ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಸಂಪೂರ್ಣ ಹಾಳಾಗಿರುವ ಕಾರಣ ಹಲವು ಮನೆಗಳ ನಿವಾಸಿಗಳು ತಮ್ಮ ವಾಹನಗಳನ್ನು ಮನೆಗಳವರೆಗೆ ತರಲು ಸಾಧ್ಯವಾಗದೆ, ದೂರದ ಸ್ಥಳಗಳಲ್ಲಿ ನಿಲ್ಲಿಸಿ ನಡೆದುಕೊಂಡು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆ ದುರಸ್ತಿಗೆ ಸಂಬಂಧಿಸಿ ಹಲವು ವರ್ಷಗಳಿಂದ ಗ್ರಾಮಸಭೆಗಳಲ್ಲಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರತಿ ಚುನಾವಣೆಯ ಸಂದರ್ಭದಲ್ಲೂ ರಸ್ತೆ ಕಾಂಕ್ರೀಟ್ ಮಾಡುವ ಭರವಸೆ ನೀಡಲಾಗುತ್ತಿದೆಯಾದರೂ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿರುವ ಆಳವಾದ ಗುಂಡಿಗಳು ಅಪಾಯಕಾರಿಯಾಗಿದ್ದು, ಸಣ್ಣ ಮಕ್ಕಳು ಅಥವಾ ವೃದ್ಧರು ಕಾಲು ಜಾರಿ ಬಿದ್ದರೆ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.