ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ ರಾಷ್ಟ್ರಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಆಳ್ವಾಸ್ ನುಡಿಸಿರಿ–ವಿರಾಸತ್ ಅನ್ನು ಮುಂಬರುವ ವರ್ಷದ ಜನವರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಈ ಸಂಬಂಧ ಡಾ. ಎಂ. ಮೋಹನ ಆಳ್ವ ಅವರ ಸ್ವಗೃಹದಲ್ಲಿ ನಡೆದ ಪ್ರಾಥಮಿಕ ಸಮಾಲೋಚನಾ ಸಭೆಯಲ್ಲಿ, ಈ ಬಾರಿ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಉತ್ಸವಗಳನ್ನು ಒಂದೇ ವೇಳೆಯಲ್ಲಿ ಆಯೋಜಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಎಂ. ಮೋಹನ ಆಳ್ವ, ಪ್ರತಿವರ್ಷ ಹೊಸ ಆಲೋಚನೆ, ಹೊಸ ಪರಿಕಲ್ಪನೆ ಹಾಗೂ ಹೊಸ ತಲೆಮಾರಿನ ಭಾಗವಹಿಸುವಿಕೆಗೆ ಆದ್ಯತೆ ನೀಡುತ್ತಾ ಉತ್ಸವವನ್ನು ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.

ಜನವರಿಯಲ್ಲಿ ನಡೆಯಲಿರುವ ಉತ್ಸವದಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವುದರೊಂದಿಗೆ ಯುವಜನತೆ, ಕನ್ನಡದ ಭವಿಷ್ಯ, ದೇಶೀಯತೆ, ಪರಿಸರ ಸಂರಕ್ಷಣೆ ಹಾಗೂ ಸಹಬಾಳ್ವೆಯಂತಹ ಸಮಕಾಲೀನ ವಿಷಯಗಳ ಕುರಿತು ಗಂಭೀರ ಚರ್ಚೆಗಳಿಗೆ ವೇದಿಕೆ ಕಲ್ಪಿಸಲಾಗುವುದು ಎಂದರು.

ಸಮಾಜದ ವಿವಿಧ ವರ್ಗಗಳನ್ನು ಒಂದೇ ವೇದಿಕೆಗೆ ತಂದು ಸಂವಾದ, ಸೃಜನಶೀಲತೆ, ಸಂಸ್ಕೃತಿ ಮತ್ತು ಸಾಮಾಜಿಕ ಬದ್ಧತೆಯನ್ನು ಬೆಸೆಯುವ ಸಮಗ್ರ ಉತ್ಸವವಾಗಿ ನುಡಿಸಿರಿ–ವಿರಾಸತ್ ರೂಪಿಸುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.

ಪಾಡೇಕಲ್ಲು ವಿಷ್ಣು ಭಟ್ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳು, ಸಹಿಷ್ಣುತೆ ಹಾಗೂ ವೈಚಾರಿಕತೆಯನ್ನು ಬೆಳೆಸುವ ಚಿಂತನೆಗಳಿಗೆ ಆಳ್ವಾಸ್ ನುಡಿಸಿರಿ ಸದಾ ವೇದಿಕೆಯಾಗಿದ್ದು, ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಸೆಯುವ ಮೂಲಕ ಆರೋಗ್ಯಕರ ಚಿಂತನೆಗೆ ಸದೃಢ ನೆಲೆ ನಿರ್ಮಿಸಿದೆ ಎಂದರು. ಹೊಸ ತಲೆಮಾರಿನ ಭಾಗವಹಿಸುವಿಕೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನುಡಿಸಿರಿ ಇನ್ನಷ್ಟು ಅರ್ಥಪೂರ್ಣವಾಗಿ ಬೆಳೆಯಲಿ ಎಂದು ಆಶಿಸಿದರು.

ಡಾ. ಧನಂಜಯ ಕುಂಬ್ಳೆ ಮಾತನಾಡಿ, ಡಾ. ಎಂ. ಮೋಹನ ಆಳ್ವ ಶಿಕ್ಷಣ ಕ್ಷೇತ್ರದ ಜೊತೆಗೆ ಸಮಾಜದ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸಿದ ದೂರದೃಷ್ಟಿಯ ನಾಯಕರಾಗಿದ್ದು, ನುಡಿಸಿರಿಯ ಮೂಲಕ ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು. ಯುವಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಹಾಗೂ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವಲ್ಲಿ ಅವರ ಕೊಡುಗೆ ಅನನ್ಯ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ನುಡಿಸಿರಿಯ ಪರಿಕಲ್ಪನೆ, ಸರ್ವಾಧ್ಯಕ್ಷರ ಆಯ್ಕೆ, ಉದ್ಘಾಟಕರ ಹೆಸರುಗಳು, ವಿವಿಧ ಗೋಷ್ಠಿಗಳ ವಿಷಯಗಳು, ಸಂಪನ್ಮೂಲ ವ್ಯಕ್ತಿಗಳ ಆಯ್ಕೆ, ವಿಶೇಷೋಪನ್ಯಾಸಗಳ ವಿಷಯ ಮತ್ತು ಉಪನ್ಯಾಸಕರ ಪಟ್ಟಿ, ನುಡಿಸಿರಿ ಪ್ರಶಸ್ತಿಗೆ ಅರ್ಹರ ಹೆಸರುಗಳು ಹಾಗೂ ವಿವಿಧ ವೇದಿಕೆಗಳಿಗೆ ನಾಮಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಉತ್ಸವವನ್ನು ಇನ್ನಷ್ಟು ಅರ್ಥಪೂರ್ಣ ಹಾಗೂ ವೈವಿಧ್ಯಮಯವಾಗಿ ರೂಪಿಸಿ ಜನಸಾಮಾನ್ಯರ ಭಾಗವಹಿಸುವಿಕೆಗೆ ಉತ್ತೇಜನ ನೀಡುವ ಕುರಿತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಡಾ. ಎಂ. ಪಿ. ಶ್ರೀನಾಥ್, ಬಾಲಕೃಷ್ಣ ಶೆಟ್ಟಿ, ತುಕಾರಾಮ್ ಪೂಜಾರಿ, ಶಕುಂತಲಾ ಶೆಟ್ಟಿ, ಸತ್ಯನಾರಾಯಣ ಮಲ್ಲಿಪಟ್ಟಣ ಹಾಗೂ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು. ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು.