ಮೂಡುಬಿದಿರೆ: ಅಡಿಕೆ ಬೆಳೆಗಿಂತ ಹೆಚ್ಚಿನ ವೆಚ್ಚ ಹಾಗೂ ನಿರಂತರ ಆರೈಕೆ ಅಗತ್ಯವಿರುವ ರಂಬೂಟಾನ್ ಬೆಳೆಯನ್ನು ಕೇವಲ ಯೂಟ್ಯೂಬ್ ವಿಡಿಯೊಗಳನ್ನು ನೋಡಿ ಆರಂಭಿಸಬಾರದು. ಉತ್ತಮ ತೋಟಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ, ವಿಜ್ಞಾನಿಗಳು ಹಾಗೂ ಅನುಭವಿಗಳ ಮಾರ್ಗದರ್ಶನದೊಂದಿಗೆ ರಂಬೂಟಾನ್ ಬೆಳೆ ಬೆಳೆಸಬೇಕು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಸಲಹೆ ನೀಡಿದರು.
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರ ಶನಿವಾರ ಆಯೋಜಿಸಿದ್ದ ತೋಟಗಾರಿಕೆ ಬೆಳೆಗಳಲ್ಲಿನ ರಂಬೂಟಾನ್ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಸಿಲು ಬೀಳುವ ಜಾಗಗಳಲ್ಲಿ, ವಿಶೇಷವಾಗಿ ಇಳಿಜಾರು ಪ್ರದೇಶಗಳಲ್ಲಿ ಮಳೆಗಾಲ ಹೊರತುಪಡಿಸಿ ಸಮರ್ಪಕ ನೀರಾವರಿ, ಶಿಫಾರಸು ಮಾಡಿದ ಗೊಬ್ಬರ, ಜೀವಾಣು ಸೇರಿದಂತೆ ಅಗತ್ಯ ಒಳಸುರಿಗಳ ಒದಗಣೆ ಹಾಗೂ ಸಕಾಲದಲ್ಲಿ ಪ್ರೂನಿಂಗ್ ಸೇರಿದಂತೆ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರೆ ಕರಾವಳಿ ಭಾಗದಲ್ಲೂ ರಂಬೂಟಾನ್ ಹಣ್ಣಿನ ತೋಟಗಾರಿಕೆಯನ್ನು ಯಶಸ್ವಿಯಾಗಿ ಕೈಗೊಳ್ಳಬಹುದು ಎಂದು ತಿಳಿಸಿದರು. ಉತ್ತಮ ತಳಿಗಳು, ನಾಟಿ, ಪೋಷಣೆ ಹಾಗೂ ನಿರ್ವಹಣೆಯ ಕ್ರಮಗಳ ಬಗ್ಗೆಯೂ ಅವರು ವಿವರಿಸಿದರು.
ಮಂಗಳೂರಿನ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ್ ಎನ್. ತೋಟಗಾರಿಕೆ ಬೆಳೆಗಳಲ್ಲಿ ಮಿತವ್ಯಯ ನೀರಾವರಿ ಪದ್ಧತಿ ಕುರಿತು ಮಾಹಿತಿ ನೀಡಿದರು. ಮಳೆಗಾಲವನ್ನು ಹೊರತುಪಡಿಸಿ ಅಡಿಕೆಗೆ ದಿನಕ್ಕೆ ಸುಮಾರು 20 ಲೀಟರ್ ಹಾಗೂ ತೆಂಗಿಗೆ 60ರಿಂದ 65 ಲೀಟರ್ ನೀರು ಒದಗಿಸಬೇಕು. ಒಂದೇ ಮೂಲದಿಂದ ನೀರು ಪೂರೈಸುವ ಸಂದರ್ಭ ಯಾಂತ್ರೀಕೃತ ವ್ಯವಸ್ಥೆಯ ಮೂಲಕ ಎಲ್ಲ ಬೆಳೆಗಳಿಗೂ ಅಗತ್ಯ ಪ್ರಮಾಣದ ನೀರು ತಲುಪುವಂತೆ ವ್ಯವಸ್ಥೆ ರೂಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಯೋಜಕರಾದ ಜವುಳಿ ಉದ್ಯಮಿ ಹಾಗೂ ಕೃಷಿಕ ಪ್ರಭಾಚಂದ್ರ ಜೈನ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಗ್ರಾಮೀಣ ಜೀವನದಲ್ಲಿ ಕೃಷಿ ಕಷ್ಟಕರವಾಗಿದ್ದರೂ ನೆಮ್ಮದಿ ಇದೆ. ಆದರೆ ಆಧುನಿಕ ಜೀವನಶೈಲಿಗೆ ಹೊಂದಿಕೊಂಡಿರುವ ಮುಂದಿನ ತಲೆಮಾರು ಕೃಷಿಯನ್ನು ಮುಂದುವರಿಸುತ್ತಾರೆಯೇ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ಶೆಟ್ಟಿ, ಕುಪ್ಪೆಪದವು ಮನೋಹರ ಶೆಟ್ಟಿ ಹಾಗೂ ಜಿನೇಂದ್ರ ಜೈನ್ ಸಂವಾದದಲ್ಲಿ ಪಾಲ್ಗೊಂಡರು.
ಸೋನ್ಸ್ ಫಾರ್ಮ್‌ನ ಸುನಿಲ್ ಸೋನ್ಸ್ ತೆಂಗಿನ ಹಿಂಗಾರದಿಂದ ಆರೋಗ್ಯವರ್ಧಕ ಕಲ್ಪರಸ ತಯಾರಿಸುವ ಜಿಲ್ಲಾ ಮಟ್ಟದ ಸಹಕಾರಿ ಸಂಘಟನೆಯ ಕುರಿತು ಮಾಹಿತಿ ನೀಡಿದರು. ಆಳ್ವಾಸ್ ರೇಡಿಯೋದ ಆರ್ಜಿತ್ ಜೈನ್ ಕೃಷಿ ಕಾರ್ಯಕ್ರಮಗಳ ಪ್ರಸಾರಕ್ಕೆ ಸಹಕಾರ ಕೋರಿದರು. ಟಾಟಾ ಎಐಜಿ ಅಧಿಕಾರಿಗಳು ಹವಾಮಾನ ಆಧಾರಿತ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಸಂಬಂಧಿಸಿದ ಫಸಲ್ ಬಿಮಾ ಯೋಜನೆ ಕುರಿತು ಮಾಹಿತಿ ನೀಡಿದರು.
ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ಲಿಡ್ವಿನ್ ಡಿಕೋಸ್ತ ಸಹಿತ ಪ್ರಮುಖರು ಅತಿಥಿಗಳನ್ನು ಗೌರವಿಸಿದರು. ಜಿನೇಂದ್ರ ಜೈನ್ ನಿರೂಪಿಸಿ, ಹರೀಶ್ ಆರ್. ಕೋಟ್ಯಾನ್ ವಂದಿಸಿದರು.