ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕಡಂದಲೆ–ಪಾಲಡ್ಕ ಆಶ್ರಯದಲ್ಲಿ ‘ಆಟಿಡೊಂಜಿ ದಿನ – ಪನ್ಪಿನ ಪೊರ್ಲು ಲೇಸ್’ ಕಾರ್ಯಕ್ರಮ ಭಾನುವಾರ ಸಾಂಪ್ರದಾಯಿಕ ವೈಭವದೊಂದಿಗೆ ನಡೆಯಿತು.

ಆಟಿ ತಿಂಗಳ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಆಚರಣೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಲ್ಲವ ಸಂಘ ಸೇವಾದಳದ ಅಧ್ಯಕ್ಷರು, ತುಳುನಾಡಿನಲ್ಲಿ ಆಟಿ ತಿಂಗಳು ವಿಶೇಷ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವ ಹೊಂದಿದ್ದು, ಪ್ರಕೃತಿಗೆ ಗೌರವ ಸಲ್ಲಿಸುವುದು, ದೇವರ ಆರಾಧನೆ, ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವುದು, ಔಷಧೀಯ ಸಸ್ಯಗಳ ಬಳಕೆ ಹಾಗೂ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸಂಪ್ರದಾಯಗಳನ್ನು ಆಚರಿಸುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು. ಆಟಿ ತಿಂಗಳು ಪೂರ್ವಜರ ಪರಂಪರೆ, ಜನಪದ ಆಚರಣೆಗಳು ಹಾಗೂ ಒಗ್ಗಟ್ಟಿನ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪವಿತ್ರ ಕಾಲವಾಗಿದ್ದು, ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ‘ಆಟಿಡೊಂಜಿ ದಿನ – ಪನ್ಪಿನ ಪೊರ್ಲು ಲೇಸ್’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭಜನಾ ಮಂಡಳಿ ಅಧ್ಯಕ್ಷ ಶಿವರಾಮ್ ಅಮೀನ್ ಅವರನ್ನು ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಪ್ರದಾಯಿಕ ಆಟೋಟಗಳು ಹಾಗೂ ಸ್ನೇಹಮಿಲನದ ಮೂಲಕ ಆಟಿ ತಿಂಗಳ ವೈಶಿಷ್ಟ್ಯವನ್ನು ಪರಿಚಯಿಸಲಾಯಿತು.

ಲೀಲಾದರ್ ಪೂಜಾರಿ, ಸೀತಾರಾಮ ಸಾಲ್ಯಾನ್, ಸೌಮ್ಯ ಗಣೇಶ್, ಪ್ರಮೋದ್ ಸಾಲ್ಯಾನ್, ವೆಂಕಟೇಶ್ ಕೋಟ್ಯಾನ್, ಗಿರೀಶ್ ಕೋಟ್ಯಾನ್, ಜಯ ಪೂಜಾರಿ, ನಾರಾಯಣ ಪೂಜಾರಿ, ಲಕ್ಷ್ಮಣ ನಾಯ್ಕ ಪುತ್ತಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕು ಸಂಪಿಗೆ ವಲಯದ ಮೇಲ್ವಿಚಾರಕ ಶ್ರೀನಿವಾಸ ಗೌಡ, ಲೀಲಾ ಪೂಜಾರ್ತಿ ಕಡಂದಲೆ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.