ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕಿನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಬೆಳುವಾಯಿ ವಲಯದ ಕರಿಯನಂಗಡಿ ಕಾರ್ಯಕ್ಷೇತ್ರದ ಸಿಂಚನ ಜ್ಞಾನವಿಕಾಸ ಕೇಂದ್ರದ ಸ್ವಉದ್ಯೋಗ ಪ್ರೇರಣಾ ಶಿಬಿರವು ಕುಕ್ಕುಡೆಲು ಮರಾಟಿ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು.
ತಾಲೂಕು ಯೋಜನಾಧಿಕಾರಿ ಧನಂಜಯ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂಪುಗೊಂಡಿರುವ ಸ್ವಉದ್ಯೋಗಗಳು ಇತರರಿಗೆ ಮಾದರಿಯಾಗಿದ್ದು, ಮುಂದೆಯೂ ಇಂತಹ ಉಪಯುಕ್ತ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ವಲಯ ಅಧ್ಯಕ್ಷೆ ಬಬಿತ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್ ಮಾತನಾಡಿ, ರುಡ್‌ಸೆಟ್ ಸಂಸ್ಥೆಯ ಸ್ಥಾಪನೆ, ಕಾರ್ಯವೈಖರಿ, ವಿವಿಧ ಸ್ವಉದ್ಯೋಗ ತರಬೇತಿಗಳು, ತರಬೇತಿ ಸೌಲಭ್ಯಗಳು ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.
ಸ್ಥಳೀಯ ಜೋಹರಾ ಸಂಪ್ರದಾಯಿಕ ತಿನಿಸು ಸಂಸ್ಥೆಯ ಮಾಲೀಕ ಶೇಖ್ ಸಾಹಿಲ್ ಮಾತನಾಡಿ, ಮಹಿಳೆಯರು ಸ್ವಉದ್ಯೋಗದಲ್ಲಿ ತೊಡಗುವುದರಿಂದ ಕುಟುಂಬದ ಆರ್ಥಿಕ ಮಟ್ಟ ಹೆಚ್ಚುವುದರ ಜೊತೆಗೆ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮಸಾಲೆ ಪುಡಿ ತಯಾರಿಕೆ, ಉಪ್ಪಿನಕಾಯಿ ತಯಾರಿಕೆ, ಜೇನು ಕೃಷಿ, ಅಡಿಕೆ ಕೃಷಿ, ತೆಂಗಿನ ಕೃಷಿ, ಆಡು ಸಾಕಣೆ, ಹೈನುಗಾರಿಕೆ ಹಾಗೂ ಹೈನುಗಾರಿಕೆ ಆಧಾರಿತ ಉತ್ಪನ್ನಗಳ ತಯಾರಿಕೆ ಸೇರಿದಂತೆ ಮನೆಯಿಂದಲೇ ಕೈಗೊಳ್ಳಬಹುದಾದ ವಿವಿಧ ಸಣ್ಣ ಉದ್ಯಮಗಳು, ಅವುಗಳ ಮಾರುಕಟ್ಟೆ ವ್ಯವಸ್ಥೆ ಮತ್ತು ಉದ್ಯಮ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಸೇವಾ ಪ್ರತಿನಿಧಿ ವಿದ್ಯಾ ಸ್ವಾಗತಿಸಿದರು. ಸಮನ್ವಯಾಧಿಕಾರಿ ವಿನುತಾ ಕಾರ್ಯಕ್ರಮ ನಿರೂಪಿಸಿದರು. ವಲಯದ ಮೇಲ್ವಿಚಾರಕಿ ಯಶೋದಾ ವಂದಿಸಿದರು.