ಮೂಡುಬಿದಿರೆ: ಜುಲೈ 22ರಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಿವೃತ್ತ ಶಿಕ್ಷಕ ಹಾಗೂ ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ಜಿ. ಕೆ. ಭಟ್ (ಗೋಪಾಲಕೃಷ್ಣ ಭಟ್) ಅವರಿಗೆ ಕಲ್ಲಬೆಟ್ಟು ಗಣೇಶೋತ್ಸವ ಸೇವಾ ಟ್ರಸ್ಟ್, ಸ್ವರ್ಣ ಗೌರಿ ಮಾತೃ ಮಂಡಳಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕರಿಂಜೆ–ಕಲ್ಲಬೆಟ್ಟು–ಮಾರೂರು ವತಿಯಿಂದ ಭಾನುವಾರ ಕಲ್ಲಬೆಟ್ಟಿನ ಅಕ್ಷಯಧಾಮ ಸಭಾಂಗಣದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಕಲ್ಲಬೆಟ್ಟು ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಮಾತನಾಡಿ, ಕಳೆದ 24 ವರ್ಷಗಳಿಂದ ಕಲ್ಲಬೆಟ್ಟು ಗಣೇಶೋತ್ಸವದಲ್ಲಿ ಜಿ. ಕೆ. ಭಟ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಎಲ್ಲರೊಂದಿಗೆ ಸ್ನೇಹಭಾವದಿಂದ ಬೆರೆತು ತಮ್ಮ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದರು. ಗಣೇಶೋತ್ಸವಕ್ಕೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕೆಂಬ ಆಶಯ ಹೊಂದಿದ್ದ ಜಿ. ಕೆ. ಭಟ್, ಯಾರಿಗೂ ತಿಳಿಸದೆ ₹50 ಸಾವಿರವನ್ನು ಟ್ರಸ್ಟ್ ಖಾತೆಗೆ ವರ್ಗಾಯಿಸಿ ತಮ್ಮ ಸಮರ್ಪಣಾ ಮನೋಭಾವವನ್ನು ತೋರಿಸಿದ್ದರು. ಗುರುಪೂಜೆಯ ದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಅವಕಾಶ ದೊರೆತಿರುವುದು ಸಂಘದ ಕಾರ್ಯಕರ್ತನಿಗೆ ದೊರೆಯಬಹುದಾದ ಅತ್ಯುನ್ನತ ಗೌರವ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಹಾಗೂ ಶ್ರೀ ಗಣೇಶ ಸೇವಾ ಟ್ರಸ್ಟ್ ಧರ್ಮದರ್ಶಿ ಶಿಕಾರಿಪುರ ಈಶ್ವರ ಭಟ್ ಮಾತನಾಡಿ, ಜಿ. ಕೆ. ಭಟ್ ತಮ್ಮ ಬದುಕನ್ನು ಉನ್ನತ ತತ್ವಗಳಿಗೆ ಮುಡಿಪಾಗಿಟ್ಟ ವ್ಯಕ್ತಿಯಾಗಿದ್ದರು. ಸನಾತನ ಧರ್ಮ, ಸಂಸ್ಕಾರ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಉದ್ದೇಶದಿಂದ ಬದುಕಿದ ಸಾತ್ವಿಕ ವ್ಯಕ್ತಿಯನ್ನು ಕಳೆದುಕೊಂಡಿರುವುದು ದುಃಖದ ಸಂಗತಿ ಎಂದರು.
ಗಣೇಶೋತ್ಸವಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಈಗಾಗಲೇ ಜಾಗ ಖರೀದಿಸಲಾಗಿದ್ದು, ಅಲ್ಲಿ 'ಶ್ರೀ ಗಣೇಶ ಸೇವಾ ಧಾಮ' ನಿರ್ಮಾಣವಾಗಬೇಕೆಂಬ ಕನಸು ಜಿ. ಕೆ. ಭಟ್ ಹೊಂದಿದ್ದರು. ಆ ಕನಸನ್ನು ಸಾಕಾರಗೊಳಿಸಲು ಎಲ್ಲರೂ ಸಂಕಲ್ಪ ಮಾಡಿದರೆ ಅದುವೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಆಗಲಿದೆ ಎಂದು ಶಿಕಾರಿಪುರ ಈಶ್ವರ ಭಟ್ ಅಭಿಪ್ರಾಯಪಟ್ಟರು.
ಉದ್ಯಮಿ ಕೆ. ಶ್ರೀಪತಿ ಭಟ್, ರಮೇಶ್ಚಂದ್ರ ಪಿ., ಉಪನ್ಯಾಸಕ ಹರೀಶ್ ಕಾಪಿಕಾಡ್ ಜಿ. ಕೆ. ಭಟ್ ಅವರ ವ್ಯಕ್ತಿತ್ವ, ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವವನ್ನು ಸ್ಮರಿಸಿದರು. ಹಿರಿಯ ಸಾಹಿತಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು.