ಮೂಡುಬಿದಿರೆ: ವಿಜ್ಞಾನವನ್ನು ಘನ, ದ್ರವ ಹಾಗೂ ಅನಿಲಕ್ಕೆ ಮಾತ್ರ ಸೀಮಿತಗೊಳಿಸದೆ, ನಾಲ್ಕನೇ ಸ್ಥಿತಿಯಾದ ಪ್ಲಾಸ್ಮಾ ಕುರಿತು ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು. ಎಂದು ಗಾಂಧಿನಗರದ ಇನ್‌ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾ ರಿಸರ್ಚ್ (ಐಪಿಆರ್)ನ ವೈಜ್ಞಾನಿಕ ಅಧಿಕಾರಿ ಹಾಗೂ ಔಟ್‌ರೀಚ್ ವಿಭಾಗದ ಮುಖ್ಯಸ್ಥ ಡಾ. ಎನ್. ರಾಮಸುಬ್ರಮಣ್ಯನ್ ಹೇಳಿದರು.

ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಭಾರತದ ಅಣುಶಕ್ತಿ ಇಲಾಖೆಯ ಅಧೀನದ ಇನ್‌ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾ ರಿಸರ್ಚ್ (ಐಪಿಆರ್) ಸಹಯೋಗದಲ್ಲಿ ಎಐಇಟಿ ಎಂಬಿಎ ಸಭಾಂಗಣದಲ್ಲಿ ನಡೆದ ಐದು ದಿನಗಳ ನಾಲ್ಕನೇ ರಾಜ್ಯಮಟ್ಟದ ಪ್ಲಾಸ್ಮಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ಲಾಸ್ಮಾ ವಿಜ್ಞಾನ ಮತ್ತು ತಂತ್ರಜ್ಞಾನವು ಎಲೆಕ್ಟ್ರಾನಿಕ್ಸ್, ಸೂಪರ್‌ಕಂಡಕ್ಟಿವಿಟಿ, ಜವಳಿ, ವೈದ್ಯಕೀಯ ಹಾಗೂ ಅಂತರಿಕ್ಷ ಕ್ಷೇತ್ರಗಳಲ್ಲಿ ವ್ಯಾಪಕ ಬಳಕೆಯಲ್ಲಿದ್ದು, ಸುಸ್ಥಿರ ಹಾಗೂ ಸ್ವಚ್ಛ ಶಕ್ತಿಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವಿದ್ಯಾರ್ಥಿಗಳು ಭೌತಶಾಸ್ತ್ರ, ಗಣಿತ ಹಾಗೂ ಎಂಜಿನಿಯರಿಂಗ್ ವಿಷಯಗಳಲ್ಲಿ ಆಸಕ್ತಿ ಬೆಳೆಸಿ ಸಂಶೋಧನಾ ಕ್ಷೇತ್ರಕ್ಕೆ ಬರಬೇಕು ಎಂದರು.

ಇನ್‌ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾ ರಿಸರ್ಚ್ (ಐಪಿಆರ್)ನ ವೈಜ್ಞಾನಿಕ ಅಧಿಕಾರಿ ಚೇತನ್ ಜರಿವಾಲಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಶಶಿಕುಮಾರ್ ಉಪಸ್ಥಿತರಿದ್ದರು.

ಶಾರ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ಟೆಲ್ಲಾ ಸಾಜಿ ಸ್ವಾಗತಿಸಿದರು.