ಮೂಡುಬಿದಿರೆ: ಕಲ್ಲಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ಡೋಡಿ ಗ್ರಾಮದ ಬೃಹತ್ ಕೋಳಿ ಸಾಕಾಣಿಕೆ ಫಾರ್ಮ್‌ನಿಂದ ಉಂಟಾಗಿರುವ ನೊಣಗಳ ಕಾಟಕ್ಕೆ ಸಂಬಂಧಿಸಿ ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಮೂರು-ನಾಲ್ಕು ತಿಂಗಳಿನಿಂದ ಫಾರ್ಮ್ ಸುತ್ತಮುತ್ತಲಿನ ಸುಮಾರು 50 ಮೀಟರ್ ವ್ಯಾಪ್ತಿಯ ಐದರಿಂದ ಆರು ಮನೆಗಳ ನಿವಾಸಿಗಳು ನೊಣಗಳ ಹಾವಳಿಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೋಳಿ ಫಾರ್ಮ್‌ನ ಸಮರ್ಪಕ ನಿರ್ವಹಣೆಯ ಕೊರತೆಯೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೋಳಿ ಸಾಕಾಣಿಕೆ ಆರಂಭಿಸುವ ಸಂದರ್ಭದಲ್ಲೇ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರೂ ಗ್ರಾಮ ಪಂಚಾಯಿತಿ ಅನುಮತಿ ನೀಡಿತ್ತು. ಫಾರ್ಮ್ ಮಾಲೀಕರು ಬೇರೆಡೆ ವಾಸವಾಗಿರುವುದರಿಂದ ಸ್ಥಳೀಯರು ಎದುರಿಸುತ್ತಿರುವ ದುರ್ವಾಸನೆ ಹಾಗೂ ನೊಣಗಳ ಸಮಸ್ಯೆಯ ತೀವ್ರತೆ ಅವರಿಗೆ ತಿಳಿದಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.
ನೊಣಗಳ ಹಾವಳಿಯಿಂದ ಆಹಾರ ಸೇವನೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ವಯೋವೃದ್ಧರ ಆರೈಕೆಯೂ ತೊಂದರೆಗೆ ಸಿಲುಕಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯ ನಿವಾಸಿ ಜಾಯ್ಸನ್ ಡಿ'ಸೋಜಾ ಆರೋಪಿಸಿದ್ದಾರೆ. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಸಾರ್ವಜನಿಕರಿಗೆ ನೆಮ್ಮದಿಯ ವಾತಾವರಣ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.