ಮೂಡುಬಿದಿರೆ: ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಕರ್ತವ್ಯ ನಿರ್ವಹಿಸಿದ್ದ ಎನ್‌ಬಿ ಸುಬೇದಾರ್ ಹರೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಮತ್ತು ಯೋಧರ ತ್ಯಾಗದ ಮಹತ್ವವನ್ನು ತಿಳಿಸಿದರು.
ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹರೀಶ್, ಭಾರತೀಯ ಯೋಧರು ಶತ್ರುಗಳಾಗಿದ್ದರೂ ಶಸ್ತ್ರರಹಿತರ ಮೇಲೆ ಎಂದಿಗೂ ಶಸ್ತ್ರ ಪ್ರಯೋಗ ಮಾಡದ ಉದಾತ್ತ ಗುಣ ಹೊಂದಿದ್ದಾರೆ ಎಂದು ಹೇಳಿದರು. ಸಮುದ್ರಮಟ್ಟದಿಂದ ಸಾವಿರಾರು ಮೀಟರ್ ಎತ್ತರದಲ್ಲಿರುವ, ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕಾರ್ಗಿಲ್‌ನಂತಹ ದುರ್ಗಮ ಪ್ರದೇಶದಲ್ಲಿ 2000ರಲ್ಲಿ ಕರ್ತವ್ಯ ನಿರ್ವಹಿಸಿ ಭಾರತ ಮಾತೆಯ ಸೇವೆ ಸಲ್ಲಿಸಿದ ಧನ್ಯತೆ ತಮ್ಮದಾಗಿದೆ. ಭಾರತಾಂಬೆಯ ಸುಪುತ್ರನಾಗಿ ದೇಶಸೇವೆ ಮಾಡುವುದು ತಮ್ಮ ಬದ್ಧತೆಯಾಗಿತ್ತು ಎಂದು ತಿಳಿಸಿದ ಅವರು, ಕಾರ್ಗಿಲ್ ಯುದ್ಧದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮೂಡುಬಿದಿರೆ ಮೂಲದ ಎನ್‌ಬಿ ಸುಬೇದಾರ್ ಹರೀಶ್ ಅವರನ್ನು ಪ್ರೇರಣಾ ಶಾಲೆ ಹಾಗೂ ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ವತಿಯಿಂದ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ, ಎಂ. ಶಾಂತರಾಮ ಕುಡ್ವ ಗೌರವಿಸಿದರು.
ಪ್ರೇರಣಾ ಶಾಲೆಯ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಮಾತನಾಡಿ, ತಮ್ಮ ಪತಿಯೂ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ವೇಳೆ ದುರ್ಗಮ ಪ್ರದೇಶಗಳಲ್ಲಿ ಅವರೊಂದಿಗೆ ವಾಸಿಸಿದ ಅನುಭವವಿದೆ. ಯೋಧನ ಪತ್ನಿಯಾಗಿ ಬದುಕು ಸಾರ್ಥಕವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೇರಣಾ ಶಾಲೆಯ ಸಂಚಾಲಕ ಎಂ. ಶಾಂತರಾಮ ಕುಡ್ವ ಮಾತನಾಡಿ, ರೈತರು ದೇಶದ ಬೆನ್ನೆಲುಬಾದರೆ ಯೋಧರು ದೇಶದ ಹೃದಯವಾಗಿದ್ದಾರೆ. ಇಂದು ದೇಶದ ಜನರು ನೆಮ್ಮದಿಯಿಂದ ಬದುಕಲು ಗಡಿಯಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಯೋಧರ ತ್ಯಾಗವೇ ಕಾರಣ ಎಂದು ಹೇಳಿದರು. ಹರ್ಷಿತಾ ಅತಿಥಿಗಳನ್ನು ಸ್ವಾಗತಿಸಿದರು. ಗ್ರೀಷ್ಮಾ ಕಾರ್ಯಕ್ರಮ ನಿರೂಪಿಸಿದರು. ಮಯೂರಿ ವಂದಿಸಿದರು.