ಮೂಡುಬಿದಿರೆ: ಅಶ್ವತ್ಥಪುರದ ಯಕ್ಷಚೈತನ್ಯ ಸಂಸ್ಥೆಯ 22ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ತಾಳಮದ್ದಳೆ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಲಾನಿಧಿ ಸಹಕಾರೀ ಸಂಘದ ಅಧ್ಯಕ್ಷ ಎಲ್. ವಿ ರಘುನಾಥ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಳದ ಪ್ರಧಾನ ಅರ್ಚಕ ವೇ.ಮೂ. ರಂಗನಾಥ ಪಟ್ಟೆ ಆಶೀರ್ವಚನ ನೀಡಿದರು. ಹಿರಿಯ ಕಲಾಪೋಷಕ ಹಾಗೂ ಸಂಘಟಕ ಜನಾರ್ಧನ ಅಮ್ಮುಂಜೆ ಉಪಸ್ಥಿತರಿದ್ದರು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟೀಲು ದಿವಾಕರ ಕೆ.ಎಸ್. ಚಿತ್ರದುರ್ಗ ವಹಿಸಿದ್ದರು. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನ ಮತ್ತು ತಾಳಮದ್ದಳೆ ಮನೆಮಾತಾಗಿದ್ದು, ಯುವಪೀಳಿಗೆಯೂ ಈ ಕಲೆಯತ್ತ ಆಸಕ್ತಿ ತೋರುತ್ತಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಗಣೇಶ ಶರ್ಮ ಕೀರಿಕ್ಕಾಡು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವತರಾಗಿ ಭಾಗವಹಿಸಬೇಕಿದ್ದ ಸ್ಥಳೀಯ ಭಾಗವತ ಮಾಧವ ಆಚಾರ್ಯ ಸಂಪಿಗೆ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಸಂಸ್ಮರಣೆ ನಡೆಸಲಾಯಿತು. ಈ ವರ್ಷದ ಯಕ್ಷನಿಧಿಯನ್ನು ಮಾಧವ ಆಚಾರ್ಯ ಸಂಪಿಗೆ ಅವರ ಕುಟುಂಬಕ್ಕೆ ಸಮರ್ಪಿಸಲಾಯಿತು.
ಭಗವದ್ಗೀತೆಯಲ್ಲಿ ಸಾಧನೆ ಮಾಡಿದ ಸೌಮ್ಯ ಸುಬ್ರಹ್ಮಣ್ಯ ಮಜಲುಕೋಡಿ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕೃಷ್ಣಮೂರ್ತಿ ವಿ. ಎ ., ವಸಂತ ಭಟ್ ಪಯ್ಯಾಡಿ, ವೇ.ಮೂ. ಪ್ರಭಾಕರ ಭಟ್ ಕಂಚಿಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಟೀಲು ಕೃಷ್ಣಮೂರ್ತಿ ಸ್ವಾಗತಿಸಿದರು. ಸದಾಶಿವ ನೆಲ್ಲಿಮಾರ್ ಸನ್ಮಾನಿತರ ಕುರಿತು ಅಭಿನಂದನಾ ನುಡಿಗಳನ್ನಾಡಿದರು. ಕಿರಣ್ ಮಂಜನಬೈಲು ಮಾನಪತ್ರ ವಾಚಿಸಿದರು. ಶ್ಯಾಮಸದರ ಮಾಸ್ತರ್ ಪಯ್ಯಾಡಿ ದಿವಂಗತ ಭಾಗವತ ಮಾಧವ ಆಚಾರ್ಯ ಸಂಪಿಗೆ ಅವರ ಸಂಸ್ಮರಣಾ ಭಾಷಣ ಮಾಡಿದರು. ಕೆ. ಆರ್ ಕೃಷ್ಣಮೂರ್ತಿ ಪ್ರತಿಭಾ ಪುರಸ್ಕೃತರ ಸಾಧನೆಯನ್ನು ಪರಿಚಯಿಸಿದರು. ಸುರೇಂದ್ರ ಬಡಗಾಬೆಟ್ಟು ವಂದಿಸಿದರು.
ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಕಲಾವಿದರಿಂದ 'ಅತಿಕಾಯ–ರಾವಣ', 'ಭೀಷ್ಮ–ಕೌರವ', 'ರಕ್ತಬೀಜ–ಶುಂಭ–ಕೌಶಿಕೆ', ಮಧ್ಯಾಹ್ನ ಪ್ರಸಿದ್ಧ ಕಲಾವಿದರಿಂದ 'ಸಮರ ಸನ್ನಾಹ' ಹಾಗೂ ಸಂಜೆ ಜಿಲ್ಲೆಯ ಹಿರಿಯ ಕಲಾವಿದರಿಂದ 'ಶುಕ್ರನೀತಿ' ತಾಳಮದ್ದಳೆ ಪ್ರದರ್ಶನಗಳು ನಡೆದವು.