ಮೂಡುಬಿದಿರೆ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಕಾರ್ಕಳ ತಾಲೂಕು ಕಾಂತಾವರ ಸಮೀಪದ ಕೇಪ್ಲಾಜೆ ಶ್ರೀ ಮಹಾಮಾಯಿ ದೇವಿಗುಡಿಯಲ್ಲಿ ಕಾಲಾವಧಿಯ ಆಟಿ ಮಾರಿಪೂಜಾ ಮಹೋತ್ಸವವು ಜುಲೈ 28 ಮತ್ತು 29ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ

ಜುಲೈ 21ರಂದು ಆಟಿ ಮಾರಿಪೂಜಾ ಮಹೋತ್ಸವಕ್ಕೆ ದಿನ ಘಟಿಸುವ ಕಾರ್ಯಕ್ರಮ ನೆರವೇರಿದ್ದು, ಅದರಂತೆ ಮಹೋತ್ಸವದ ದಿನಾಂಕ ನಿಗದಿಯಾಗಿದೆ.

ಜುಲೈ 28ರಂದು ರಾತ್ರಿ 7 ಗಂಟೆಗೆ ದೇವರ ಕಟ್ಟೆಯಲ್ಲಿ ದೇವಿ ಬಿಂಬ ಪ್ರತಿಷ್ಠಾಪನೆ ಹಾಗೂ ಉಚ್ಚಂಗಿ ದರ್ಶನದೊಂದಿಗೆ ದೇವಿ ಬಿಂಬ ಆಗಮನ ನಡೆಯಲಿದೆ. ರಾತ್ರಿ 9 ಗಂಟೆಯಿಂದ ದೇವಿ ಬಿಂಬವನ್ನು ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಹಾಗೂ ದರ್ಶನ ನಡೆಯಲಿದ್ದು, ರಾತ್ರಿ 10 ಗಂಟೆಗೆ ರಾಶಿಪೂಜೆ ನೆರವೇರಲಿದೆ. ದೇವಿ ಬಿಂಬ ಗದ್ದಿಗೆಯಲ್ಲಿ ಪ್ರತಿಷ್ಠಾಪನೆಯಾದ ಬಳಿಕ ರಾತ್ರಿ 9.15ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಜುಲೈ 29ರಂದು ಪ್ರಾತಃಕಾಲ 4 ಗಂಟೆಗೆ ಅರಮನೆ ಪೂಜೆ ಆರಂಭವಾಗಲಿದೆ. ಬೆಳಿಗ್ಗೆ 4.30ರಿಂದ ಹಬ್ಬುಕಾಯಿ, ಹೂವಿನ ಪೂಜೆ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. ಸಾಯಂಕಾಲ 4.30ರಿಂದ ದೇವಿಗೆ ಮಹಾಪೂಜೆ, ಮಂಗಳಾರತಿ, ದರ್ಶನ, ಪ್ರಶ್ನಾಚಿಂತನೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ಬಳಿಕ ದರ್ಶನಬಲಿಯೊಂದಿಗೆ ದೇವಿ ಬಿಂಬ ನಿರ್ಗಮಿಸಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ವ್ಯವಸ್ಥಾಪನ ಸಮಿತಿ, ಶ್ರೀ ಕ್ಷೇತ್ರ ಕೇಪ್ಲಾಜೆ ಪ್ರಕಟಣೆಯಲ್ಲಿ ಭಕ್ತರಲ್ಲಿ ಮನವಿ ಮಾಡಿದೆ.