ಮೂಡುಬಿದಿರೆ: ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮನೆಯೇ ರಾಷ್ಟ್ರೀಯತೆಯ ಮೊದಲ ಪಾಠಶಾಲೆಯಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡುವಲ್ಲಿ ಹೆತ್ತವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಸಮಿತ್ ರಾಜ್ ಹೇಳಿದರು.
ಅಚ್ಚರಕಟ್ಟೆಯ ಸುಮುಖ ಭಜನಾ ಮಂಡಳಿ ಹಾಗೂ ಮೂಡುಬಿದಿರೆ ತಾಲ್ಲೂಕು ಹಿಂದೂ ಜಾಗರಣ ವೇದಿಕೆಯ ಸಹಭಾಗಿತ್ವದಲ್ಲಿ ದಯಾನಂದ ಪೈ ಮತ್ತು ಉಷಾ ಡಿ. ಪೈ ಕಲಾ ವೇದಿಕೆಯಲ್ಲಿ ನಡೆದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸಮಿತ್ ರಾಜ್, ಹಿಂದೂ ಸಮಾಜದ ಮೇಲೆ ಹಾಗೂ ಸನಾತನ ಸಂಸ್ಕೃತಿ ಮತ್ತು ಭಾವನೆಗಳ ವಿರುದ್ಧ ನಡೆಯುತ್ತಿರುವ ಅನ್ಯಾಯವನ್ನು ಖಂಡಿಸಿದರು. ಪಕ್ಷಬೇಧ ಮರೆತು ಹಿಂದೂ ಸಮಾಜ ಜಾಗೃತವಾಗಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಸುಮುಖ ಭಜನಾ ಮಂಡಳಿಯ ಗೌರವಾಧ್ಯಕ್ಷ ದಯಾನಂದ ಪೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ದಯಾನಂದ ಪೈ, ಜನ್ಮ ನೀಡಿದ ತಾಯಿ ಮತ್ತು ಜನ್ಮಭೂಮಿ ಎರಡೂ ಶ್ರೇಷ್ಠವಾದವು ಎಂಬ ಭಗವಾನ್ ಶ್ರೀರಾಮನ ವಾಕ್ಯವನ್ನು ಉಲ್ಲೇಖಿಸಿದರು. ವೀರ ದಾಮೋದರ ಸಾವರ್ಕರ್, ಸುಭಾಷ್‌ಚಂದ್ರ ಬೋಸ್, ಬಾಲ ಗಂಗಾಧರ ತಿಲಕ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿದ ಅವರು, ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬಾಲ್ಯದಿಂದಲೇ ರಾಷ್ಟ್ರೀಯತೆ ಹಾಗೂ ದೇಶಪ್ರೇಮವನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಸಂತೋಷ್ ಕುಮಾರ್ ಜೈನ್ ಬನ್ನಡ್ಕ, ಉಮಾವತಿ ಬಿ. ಬಂಗೇರ, ಸುಂದರ ಪೂಜಾರಿ, ಸೌಮ್ಯ, ಸಂದೀಪ್ ಹೆಗ್ಡೆ, ಉದಯ, ಪ್ರವೀಣ್ ಸಾಲ್ಯಾನ್ ಮತ್ತು ಲಕ್ಷ್ಮಣ ನಾಯ್ಕ ಉಪಸ್ಥಿತರಿದ್ದರು. ಭಜನಾ ಮಂಡಳಿಯ ವಿದ್ಯಾರ್ಥಿಗಳು, ಪೋಷಕರು ಹಾಗೂ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆರಂಭದಲ್ಲಿ ಹರಿಶ್ಚಂದ್ರ ಕೆ.ಪಿ ಸ್ವಾಗತಿಸಿದರು. ಕೊನೆಯಲ್ಲಿ ಸ್ಮಿತಾ ವಂದಿಸಿದರು.