ಜಮಖಂಡಿ: ತಾಲೂಕಿನ ಚಿನಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಮರ್ಪಣೆ ಸಂಸ್ಥೆ, ಬೆಂಗಳೂರು ವತಿಯಿಂದ ಮಧುಸೂದನ್ ಕೆ. ಅವರ ಸಹಕಾರದೊಂದಿಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಚಿಕ್ಕಯ್ಯ ಕಾಂಬಳೆ ವಹಿಸಿದ್ದರು. ದೇಣಿಗೆದಾರರು ಹಾಗೂ ಶಾಲೆಯ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಪರಮಾನಂದ ಮಾತನಾಡಿ, ತಮ್ಮ ಶಾಲೆಯಷ್ಟೇ ಅಲ್ಲದೆ ಸುತ್ತಮುತ್ತಲಿನ ಐದಾರು ಸರ್ಕಾರಿ ಶಾಲೆಗಳ ಮಕ್ಕಳಿಗೂ ಮಧುಸೂದನ್ ಕೆ. ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಶಾಲೆಯ ಮುಖ್ಯಗುರುಮಾತೆ ಮಠ ಮಾತನಾಡಿ, ಸಮರ್ಪಣೆ ಸಂಸ್ಥೆ ಹಾಗೂ ಮಧುಸೂದನ್ ಕೆ. ಅವರಿಗೆ ಶಾಲೆ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಿಕ್ಕಯ್ಯ ಕಾಂಬಳೆ ಮಾತನಾಡಿ, ಶಾಲೆ ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗುವ ನೋಟ್‌ಬುಕ್‌ಗಳನ್ನು ನೀಡುವ ಮೂಲಕ ಮಧುಸೂದನ್ ಕೆ. ಮತ್ತಷ್ಟು ಪ್ರೋತ್ಸಾಹ ನೀಡಿದ್ದಾರೆ. ಇಂತಹ ದಾನಿಗಳ ಸಹಕಾರ ಶಾಲೆಯ ಅಭಿವೃದ್ಧಿಗೆ ನೆರವಾಗಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದಾನಿಗಳನ್ನು ಶಾಲೆಯತ್ತ ಆಕರ್ಷಿಸಲು ಎಲ್ಲರೂ ಪ್ರಯತ್ನಿಸೋಣ ಎಂದು ಕರೆ ನೀಡಿದರು.
ಶಿಕ್ಷಕಿ ಬೆಳಗಲಿ ಸ್ವಾಗತಿಸಿದರು. ಶಿಕ್ಷಕಿ ಮೆಟಗುಡ್ ವಂದಿಸಿದರು. ಶಿಕ್ಷಕಿ ಬಡಿಗೇರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜಕನೂರ್, ಊರಿನ ಮುಖಂಡರಾದ ರಮೇಶ್ ಕಾಂಬಳೆ, ಶಿವಗೇಣಿ ಗಡಗಿನಾರ್, ಅನಿಲ್ ಕಾಂಬಳೆ, ತುಕ್ಕಪ್ಪ ಅಂಬಿ ಹಾಗೂ ಜಮಖಂಡಿ ಸಿಟಿ ಕಾಲೇಜಿನ ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.