ಮೂಡುಬಿದಿರೆ: ಶಿಸ್ತು, ಏಕತೆ, ಸಮರ್ಪಣಾ ಭಾವ, ಪ್ರಾಮಾಣಿಕತೆ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಎನ್‌ಸಿಸಿ ತರಬೇತಿ ಶಿಬಿರಗಳು ಪ್ರಮುಖ ವೇದಿಕೆಯಾಗಿದ್ದು, ಕೆಡೆಟ್‌ಗಳು ಶಿಬಿರದಲ್ಲಿ ದೊರೆಯುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಎಲ್ಲಾ ತರಬೇತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು 18 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಯ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರೈ ಹೇಳಿದರು.
18 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಆಯೋಜಿಸಿರುವ ಸಂಯುಕ್ತ ವಾರ್ಷಿಕ ತರಬೇತಿ ಶಿಬಿರ 13 ಹಾಗೂ ಗಣರಾಜ್ಯೋತ್ಸವ ಶಿಬಿರ 1 ಗುಂಪು ಮಟ್ಟದ ಆಯ್ಕೆ ಶಿಬಿರಕ್ಕೆ ಮೂಡುಬಿದಿರೆಯ ಮೈಟ್ ಕಾಲೇಜಿನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಲೆಫ್ಟಿನೆಂಟ್ ಕರ್ನಲ್ ನಿತಿನ್ ನಾರಾಯಣ್ ಹಾಗೂ ಸುಬೇದಾರ್ ಮೇಜರ್ ಎಂ.ಬಹದ್ದೂರ್ ರಾಣಾ ಕೆಡೆಟ್‌ಗಳಿಗೆ ಮಾರ್ಗದರ್ಶನ ನೀಡಿದರು.
ಜುಲೈ 22ರಿಂದ 31ರವರೆಗೆ ನಡೆಯುವ ಶಿಬಿರದಲ್ಲಿ ಮಂಗಳೂರು ಗುಂಪಿನ ವಿವಿಧ ಶಿಕ್ಷಣ ಸಂಸ್ಥೆಗಳ 610 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದು, ನಾಯಕತ್ವ, ಶಿಸ್ತು, ತಂಡದ ಮನೋಭಾವ, ಆತ್ಮವಿಶ್ವಾಸ ಹಾಗೂ ರಾಷ್ಟ್ರಸೇವೆಯ ಮನೋಭಾವ ಬೆಳೆಸುವುದರೊಂದಿಗೆ ಗಣರಾಜ್ಯೋತ್ಸವ ಶಿಬಿರದ ಮುಂದಿನ ಹಂತಕ್ಕೆ ಅರ್ಹ ಕೆಡೆಟ್‌ಗಳನ್ನು ಆಯ್ಕೆ ಮಾಡಲಾಗುತ್ತಿದೆ.
ಶಿಬಿರವನ್ನು 25 ಖಾಯಂ ಬೋಧಕ ಸಿಬ್ಬಂದಿ, ಒಬ್ಬ ಮಹಿಳಾ ಕೆಡೆಟ್ ಬೋಧಕಿ, 9 ಸಹಾಯಕ ಎನ್‌ಸಿಸಿ ಅಧಿಕಾರಿಗಳು ಹಾಗೂ 8 ನಾಗರಿಕ ಸಿಬ್ಬಂದಿ ನಡೆಸುತ್ತಿದ್ದಾರೆ. ಹತ್ತು ದಿನಗಳ ಶಿಬಿರದಲ್ಲಿ ಡ್ರಿಲ್, ಶಸ್ತ್ರಾಸ್ತ್ರ ತರಬೇತಿ, ಮ್ಯಾಪ್ ರೀಡಿಂಗ್, ದೈಹಿಕ ಸಾಮರ್ಥ್ಯ, ನಾಯಕತ್ವ ಅಭಿವೃದ್ಧಿ, ಫೀಲ್ಡ್ ಕ್ರಾಫ್ಟ್, ಸಾಂಸ್ಕೃತಿಕ ಚಟುವಟಿಕೆಗಳು, ವ್ಯಕ್ತಿತ್ವ ವಿಕಸನ ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ.