ಮೂಡುಬಿದಿರೆ: ಕಾರ್ಕಳ ತಾಲೂಕಿನ ಹೆರ್ಮುಂಡೆ ನಿವಾಸಿ ಸಂದೀಶ್ ಶೆಟ್ಟಿ (28) ಅವರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಮಿಜಾರು ತನ್ನ 75ನೇ ಮಾಸಿಕ ಸೇವಾಯೋಜನೆಯ ಅಂಗವಾಗಿ ₹15 ಸಾವಿರದ ಚೆಕ್ ಹಸ್ತಾಂತರಿಸಿತು.
2025ರ ಅಕ್ಟೋಬರ್ 24ರಂದು ಮೂಡುಬಿದಿರೆಯ ಒಳರಸ್ತೆಯಲ್ಲಿ ನಡೆದ ಲಾರಿ ಅಪಘಾತದಲ್ಲಿ ಸಂಧೀಶ್ ಶೆಟ್ಟಿ ಅವರ ಬೆನ್ನುಹುರಿಗೆ ತೀವ್ರ ಗಾಯವಾಗಿದ್ದು, ಸೊಂಟದ ಕೆಳಭಾಗದ ಚಲನೆಯ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ, ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಫಿಸಿಯೊಥೆರಪಿ ಸೇರಿದಂತೆ ವಿವಿಧ ಹಂತದ ಚಿಕಿತ್ಸೆಗಾಗಿ ಇದುವರೆಗೆ ಸುಮಾರು ₹12 ಲಕ್ಷ ವೆಚ್ಚವಾಗಿದೆ.
ಮುಂದಿನ ಹಂತದಲ್ಲಿ ಬೆಂಗಳೂರಿನ ಸಕ್ರಾ ಆಸ್ಪತ್ರೆಯಲ್ಲಿ ಮೂರು ತಿಂಗಳ ರೋಬೋಟಿಕ್ ಥೆರಪಿಗೆ ₹19.50 ಲಕ್ಷ ಅಗತ್ಯವಿರುವ ಹಿನ್ನೆಲೆಯಲ್ಲಿ ಸಂಧೀಶ್ ಶೆಟ್ಟಿ ಅವರ ಅಣ್ಣ ನೆರವಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಟ್ರಸ್ಟ್ ವತಿಯಿಂದ ₹15 ಸಾವಿರದ ಚೆಕ್‌ನ್ನು ಆದಿಶಕ್ತಿ (ಮಾರಿಗುಡಿ) ದೇವಸ್ಥಾನ ಮೂಡುಬಿದಿರೆಯ ಆಡಳಿತ ಮೋಕ್ತೇಸರಾದ ರಾಜಮೋಹನ್ ಶೆಟ್ಟಿ ಅವರ ಮೂಲಕ ಹಸ್ತಾಂತರಿಸಲಾಯಿತು.
ಕ್ಷೇತ್ರದ ಅರ್ಚಕರು, ಟ್ರಸ್ಟ್‌ನ ಸಂಸ್ಥಾಪಕ ನವೀನ್ ಪಿ. ಮಿಜಾರು, ಕಾರ್ಯದರ್ಶಿ ದಯಾನಂದ ಉರ್ಕಿ ಹಾಗೂ ಸೇವಾ ಮಾಣಿಕ್ಯ ಸುಮಂತ್ ಸುವರ್ಣ ಬಡಗಮಿಜಾರು ಉಪಸ್ಥಿತರಿದ್ದರು.