ಮೂಡುಬಿದಿರೆ: ಮೂಡುಬಿದಿರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಆರ್‌ಟಿಒ_ಚಾಲನ್_ಅಪ್‌ಡೇಟ್.ಎಪಿಕೆ ಹೆಸರಿನ ನಕಲಿ ಆಂಡ್ರಾಯ್ಡ್ ಎಪಿಕೆ ಫೈಲ್‌ನ್ನು ಆರ್‌ಟಿಒ ಚಾಲನ್ ಅಪ್‌ಡೇಟ್ ನೆಪದಲ್ಲಿ ವಾಟ್ಸ್ಆ್ಯಪ್ ಮೂಲಕ ಹರಡುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ಲಿಂಕ್ ಕ್ಲಿಕ್ ಮಾಡಿದ ಕೆಲವರ ಮೊಬೈಲ್ ಸಂಖ್ಯೆಗಳು ಹಾಗೂ ವಾಟ್ಸ್ಆ್ಯಪ್ ಗುಂಪುಗಳು ಹ್ಯಾಕ್ ಆಗಿರುವ ಆರೋಪಗಳು ಕೇಳಿಬಂದಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೈಬರ್ ಸುರಕ್ಷತಾ ತಜ್ಞರು ಸೂಚಿಸಿದ್ದಾರೆ.

ಅಧಿಕೃತ ಆ್ಯಪ್ ಅಲ್ಲ ಲಭ್ಯವಿರುವ ಮಾಹಿತಿಯಂತೆ, ಆರ್‌ಟಿಒ_ಚಾಲನ್_ಅಪ್‌ಡೇಟ್.ಎಪಿಕೆ ಅಧಿಕೃತ ಸರ್ಕಾರಿ ಆ್ಯಪ್ ಎಂಬುದನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಹಿತಿ ಇಲ್ಲ. ಸಾಮಾನ್ಯವಾಗಿ ಆರ್‌ಟಿಒ, ಪರಿವಹನ್ ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆಗಳು ತಮ್ಮ ಸೇವೆಗಳನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಅಧಿಕೃತ ವೆಬ್‌ಸೈಟ್‌ಗಳ ಮೂಲಕವೇ ಒದಗಿಸುತ್ತವೆ. ವಾಟ್ಸ್ಆ್ಯಪ್ ಮೂಲಕ ಎಪಿಕೆ ಫೈಲ್ ಹಂಚುವುದು ಸರ್ಕಾರದ ಅಧಿಕೃತ ವಿಧಾನವಲ್ಲ.

ವಂಚನೆ ಹೇಗೆ ನಡೆಯುತ್ತದೆ? ವಂಚಕರು "ಆರ್‌ಟಿಒ ಟ್ರಾಫಿಕ್ ಚಾಲನ್" ಮೊದಲಾದ ಹೆಸರಿನ ವಾಟ್ಸ್ಆ್ಯಪ್ ಅಥವಾ ಟೆಲಿಗ್ರಾಂ ಗುಂಪುಗಳಿಗೆ ಸಾರ್ವಜನಿಕರನ್ನು ಸೇರಿಸಿ, ವಾಹನದ ಮೇಲೆ ಚಾಲನ್ ಬಾಕಿ ಇದೆ ಅಥವಾ ಆರ್‌ಟಿಒ ಅಪ್‌ಡೇಟ್ ಅಗತ್ಯವಿದೆ ಎಂದು ನಂಬಿಸುತ್ತಾರೆ. ಬಳಿಕ ಆರ್‌ಟಿಒ_ಚಾಲನ್_ಅಪ್‌ಡೇಟ್.ಎಪಿಕೆ ಫೈಲ್‌ನ್ನು ಇನ್‌ಸ್ಟಾಲ್ ಮಾಡಲು ಸೂಚಿಸುತ್ತಾರೆ. ಗುಂಪಿನ ಹೆಸರು ಸರ್ಕಾರಿ ಇಲಾಖೆಯಂತಿದ್ದರೂ ಅದು ಅಧಿಕೃತವಾಗಿರುತ್ತದೆ ಎನ್ನುವ ಖಾತರಿ ಇರುವುದಿಲ್ಲ.

ಏನು ಅಪಾಯ? ಇಂತಹ ಎಪಿಕೆ ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಿದರೆ ಎಸ್‌ಎಂಎಸ್, ಒಟಿಪಿ, ಸಂಪರ್ಕ ವಿವರಗಳು, ಛಾಯಾಚಿತ್ರಗಳು, ಸ್ಥಳ ಮಾಹಿತಿ ಸೇರಿದಂತೆ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಗೆ ಅನಧಿಕೃತ ಪ್ರವೇಶ ಸಿಗುವ ಅಪಾಯವಿದೆ. ಇದರಿಂದ ಬ್ಯಾಂಕ್ ಖಾತೆ, ಯುಪಿಐ ಹಾಗೂ ಇತರೆ ಹಣಕಾಸು ಸೇವೆಗಳ ಮಾಹಿತಿಯೂ ದುರುಪಯೋಗವಾಗುವ ಸಾಧ್ಯತೆ ಇದೆ.

ಸಾರ್ವಜನಿಕರು ಏನು ಮಾಡಬೇಕು? ಸೈಬರ್ ಸುರಕ್ಷತಾ ತಜ್ಞರು ಗೂಗಲ್ ಪ್ಲೇ ಸ್ಟೋರ್ ಹೊರತುಪಡಿಸಿ ವಾಟ್ಸ್ಆ್ಯಪ್, ಟೆಲಿಗ್ರಾಂ ಅಥವಾ ಇತರೆ ಮೂಲಗಳಿಂದ ಬರುವ ಎಪಿಕೆ ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡದಂತೆ ಸಲಹೆ ನೀಡಿದ್ದಾರೆ. ಈಗಾಗಲೇ ಇನ್‌ಸ್ಟಾಲ್ ಮಾಡಿದ್ದರೆ ಆ್ಯಪ್ ತೆಗೆದುಹಾಕಿ, ಬ್ಯಾಂಕಿಂಗ್ ಹಾಗೂ ಇಮೇಲ್ ಖಾತೆಗಳ ಪಾಸ್‌ವರ್ಡ್‌ಗಳನ್ನು ತಕ್ಷಣ ಬದಲಾಯಿಸಬೇಕು. ವಂಚನೆಗೆ ಒಳಗಾದರೆ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ೧೯೩೦ಕ್ಕೆ ಕರೆ ಮಾಡಿ ಅಥವಾ ಸೈಬರ್‌ಕ್ರೈಮ್.ಗವ್.ಇನ್ ಮೂಲಕ ದೂರು ದಾಖಲಿಸಬಹುದು.

ಗೂಗಲ್ ಪ್ಲೇ ಸ್ಟೋರ್ ಹೊರತುಪಡಿಸಿ ವಾಟ್ಸ್ಆ್ಯಪ್, ಇಮೇಲ್ ಅಥವಾ ಅಪರಿಚಿತ ವೆಬ್‌ಸೈಟ್‌ಗಳಿಂದ ಬರುವ ಯಾವುದೇ ಎಪಿಕೆ ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡದಿರುವುದೇ ಸೈಬರ್ ವಂಚನೆಯಿಂದ ಸುರಕ್ಷಿತವಾಗಿರುವ ಅತ್ಯುತ್ತಮ ಮಾರ್ಗವಾಗಿದೆ.