ಮೂಡುಬಿದಿರೆ: ಜೈನ ಪ್ರೌಢಶಾಲೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.

ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಸೈನಿಕರ ತ್ಯಾಗ ಮತ್ತು ಸಾಹಸವನ್ನು ಸ್ಮರಿಸಿ, ರಾಷ್ಟ್ರಪ್ರೇಮ ಹಾಗೂ ದೇಶಸೇವೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ರೋಹನ್, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ತೋರಿದ ಶೌರ್ಯ, ತ್ಯಾಗ ಮತ್ತು ಪರಾಕ್ರಮವನ್ನು ವಿವರಿಸಿದರು. ಎನ್‌ಸಿಸಿ ಕೆಡೆಟ್‌ಗಳು ದೇಶದ ಶಿಸ್ತಿನ ಯುವಪಡೆಯಾಗಿದ್ದು, ದೇಶದ ಉನ್ನತಿಯ ಕುರಿತು ಸದಾ ಚಿಂತನೆ ನಡೆಸಬೇಕು. ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡುವ ಮನೋಸ್ಥೈರ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಡೆಟ್‌ಗಳಿಗೆ ದೇಶದ ಸೈನಿಕರನ್ನು ಗೌರವಿಸುವ ಹಾಗೂ ಜೀವನದುದ್ದಕ್ಕೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳುವ ಪ್ರಮಾಣವಚನ ಬೋಧಿಸಲಾಯಿತು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್ ಪ್ರಸಾದ್ ವಹಿಸಿದ್ದರು. ಶಾಲೆಯ ಹಳೆ ವಿದ್ಯಾರ್ಥಿ, ಜಿ-ಟೆಕ್ ಕಂಪ್ಯೂಟರ್ ಸಂಸ್ಥೆಯ ಮಧುಸೂಧನ್ ಶಿಂದೆ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಕಾರ್ಗಿಲ್ ಯುದ್ಧ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಎನ್‌ಸಿಸಿ ಭೂದಳ, ನೌಕಾದಳ ಮತ್ತು ವಾಯುದಳದ ಎಲ್ಲಾ ಕೆಡೆಟ್‌ಗಳು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್‌ಸಿಸಿ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.