ಮೂಡುಬಿದಿರೆ: ಎಡಪದವಿನ ಐಡಿಯಲ್ ಶಾಲೆ ಸಮೀಪ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಹೆದ್ದಾರಿಯ ಒಂದು ಭಾಗ ಬುಧವಾರ ಕುಸಿದು ಬಿದ್ದಿದೆ.
ರಸ್ತೆ ಕುಸಿತದ ಪರಿಣಾಮ ಅಶ್ವಿನ್ ನಾಯಕ್ ಅವರ ತೋಟಕ್ಕೆ ವ್ಯಾಪಕ ಹಾನಿಯಾಗಿದ್ದು, ಸುಮಾರು 1,000 ಅಡಿಕೆ ಗಿಡಗಳು ಹಾನಿಗೊಳಗಾಗಿವೆ. ಅಲ್ಲದೆ ತೋಟದ ನೀರಾವರಿಗೆ ಬಳಸುತ್ತಿದ್ದ ಕೆರೆಯಲ್ಲಿ ಮಣ್ಣು ತುಂಬಿ ಉಪಯೋಗಕ್ಕೆ ಅಸಾಧ್ಯವಾಗಿದ್ದು, ನೀರಿನ ಒರತೆಯಿರುವ ಕೆಲವು ಸುರಂಗಗಳೂ ಮುಚ್ಚಿಹೋಗಿವೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಈ ರಸ್ತೆಯಲ್ಲಿ ವಾಹನ ಸಂಚಾರ ನಡೆಯುತ್ತಿತ್ತು. ಕಳೆದ 15 ದಿನಗಳಿಂದ ರಿಟೈನಿಂಗ್ ವಾಲ್ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕಾಮಗಾರಿ ಮುಂದುವರಿದಿತ್ತು. ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
ರಸ್ತೆಯ ಅಡಿಯ ಮಣ್ಣು ಶಿಥಿಲಗೊಂಡು, ಹೊಸದಾಗಿ ನಿರ್ಮಿಸಿದ್ದ ಡಾಂಬರು ರಸ್ತೆಯ ಒಂದು ಭಾಗ ಜರಿದಿದೆ. ಸ್ಥಳದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದ್ದು, ರಸ್ತೆಯ ಉಳಿದ ಭಾಗದಲ್ಲಿಯೂ ಬಿರುಕುಗಳು ಕಾಣಿಸಿಕೊಂಡಿವೆ.
ರಸ್ತೆ ಕುಸಿತದಿಂದ ಕೆಳಭಾಗದಲ್ಲಿರುವ ಅಶ್ವಿನ್ ನಾಯಕ್ ಅವರ ತೋಟಕ್ಕೆ ಮಣ್ಣು ಜರಿದ ಪರಿಣಾಮ ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳಿಗೆ ಹಾನಿಯಾಗಿದೆ. ತೋಟದ ನೀರಾವರಿಗೆ ಪ್ರಮುಖ ಆಧಾರವಾಗಿದ್ದ ಕೆರೆಯು ಮಣ್ಣಿನಿಂದ ತುಂಬಿದ್ದು, ನೀರಿನ ಒರತೆಯಿರುವ ಕೆಲವು ಸುರಂಗಗಳು ಮುಚ್ಚಿಹೋಗಿವೆ. ಇದರಿಂದ ತೋಟದ ಕೃಷಿ ಚಟುವಟಿಕೆಗೆ ಗಂಭೀರ ಹೊಡೆತ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಂತದಲ್ಲೇ ರಸ್ತೆ ಕುಸಿದು ಕೃಷಿಭೂಮಿಗೆ ಹಾನಿಯಾಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತಾಂತ್ರಿಕ ಪರಿಶೀಲನೆ ನಡೆಸಿ, ಕುಸಿತ ನಿಯಂತ್ರಣ ಹಾಗೂ ಹಾನಿಗೊಳಗಾದ ಪ್ರದೇಶದ ಪುನಶ್ಚೇತನ ಕಾರ್ಯಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.