ಮೂಡುಬಿದಿರೆ: ಯುವ ಸಮುದಾಯದ ಅಭ್ಯುದಯದ ಮೂಲಕ ಸಮಾಜದ ಪ್ರಗತಿಯೇ ಆಳ್ವಾಸ್ ಆಶಯವಾಗಿದ್ದು, ಅದರ ಯಶಸ್ಸಿಗೆ ಎಲ್ಲ ಸಮುದಾಯಗಳ ಸಹಭಾಗಿತ್ವ ಅಗತ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಗಸ್ಟ್ 7 ಮತ್ತು 8ರಂದು ನಡೆಯಲಿರುವ ಉಚಿತ ಉದ್ಯೋಗ ಮೇಳ 'ಆಳ್ವಾಸ್ ಪ್ರಗತಿ-2026' ಹಿನ್ನೆಲೆಯಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಬುಧವಾರ ನಡೆದ ನಾಯಕತ್ವ ಸಮ್ಮಿಲನದಲ್ಲಿ ಅವರು ಮಾತನಾಡಿದರು.
19 ವರ್ಷಗಳ ಹಿಂದೆ 38 ಉದ್ಯೋಗದಾತ ಕಂಪೆನಿಗಳೊಂದಿಗೆ ಆರಂಭವಾದ 'ಆಳ್ವಾಸ್ ಪ್ರಗತಿ' ಇಂದು 300ಕ್ಕೂ ಅಧಿಕ ಕಂಪೆನಿಗಳ ಪಾಲ್ಗೊಳ್ಳುವಿಕೆಗೆ ಬೆಳೆದಿದ್ದು, ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಸಮಾಜದ ಮುಖಂಡರು ಹಾಗೂ ಯುವಜನರ ಸಹಕಾರ ಮಹತ್ವದ್ದಾಗಿದೆ ಎಂದು ಹೇಳಿದರು.
ಸುಮಾರು 800 ಮಾನವ ಸಂಪನ್ಮೂಲ ಅಧಿಕಾರಿಗಳು ಭಾಗವಹಿಸುವ ಮೇಳದಲ್ಲಿ ಯಾವುದೇ ಮಧ್ಯವರ್ತಿತನವಿಲ್ಲದೆ ನೇರ ನೇಮಕಾತಿ ನಡೆಯಲಿದ್ದು, ಸರ್ಕಾರಿ ಹಾಗೂ ಗ್ರಾಮೀಣ ಕಾಲೇಜುಗಳ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಎಸ್ಸೆಸ್ಸೆಲ್ಸಿಯಿಂದ ಉನ್ನತ ಪದವೀಧರರು ಹಾಗೂ ಅನುಭವಿಗಳಿಗೂ ಉದ್ಯೋಗಾವಕಾಶಗಳಿದ್ದು, ಎಲ್ಲರೂ ಉಚಿತವಾಗಿ ಭಾಗವಹಿಸಬಹುದು ಎಂದರು.
ಅನುಭವ ಹಂಚಿಕೊಂಡ ಸಮಾಜ ಸೇವಕ, ಉದ್ಯಮಿ ಕಾರ್ಕಳದ ಅವಿನಾಶ್ ಶೆಟ್ಟಿ, ತಾವು ಹತ್ತು ವರ್ಷಗಳ ಹಿಂದೆ 'ಆಳ್ವಾಸ್ ಪ್ರಗತಿ' ಮೂಲಕ ಉದ್ಯೋಗ ಪಡೆದು ಜೀವನದಲ್ಲಿ ಮುನ್ನಡೆ ಸಾಧಿಸಿದ್ದಾಗಿ ತಿಳಿಸಿದರು.
ಶಿಕ್ಷಣ, ಸಂಸ್ಕೃತಿ, ಕ್ರೀಡೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಆಳ್ವಾಸ್ ಸೇವೆ ಶ್ಲಾಘನೀಯವಾಗಿದ್ದು, 'ಆಳ್ವಾಸ್ ಪ್ರಗತಿ-2026' ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಿವಿಧ ಸಮುದಾಯಗಳ ಪ್ರಮುಖರು ಭರವಸೆ ನೀಡಿದರು. ಪ್ರಾಧ್ಯಾಪಕ ವಿನಾಯಕ ಗಾಳಿಮನೆ ಕಾರ್ಯಕ್ರಮ ನಿರೂಪಿಸಿದರು.