ಮೂಡುಬಿದಿರೆ: ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಭಾರತ್ ವಂದನ ಕಾರ್ಯಕ್ರಮ ನಡೆಯಿತು. ದೇಶದ ಅಖಂಡತೆ, ಸಾರ್ವಭೌಮತೆ ಮತ್ತು ಭದ್ರತೆಗಾಗಿ ಪ್ರಾಣಾರ್ಪಣೆ ಮಾಡಿದ ಭಾರತೀಯ ಯೋಧರ ಶೌರ್ಯ, ತ್ಯಾಗ ಹಾಗೂ ದೇಶಭಕ್ತಿಯನ್ನು ಸ್ಮರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಸೇನಾ ಅಧಿಕಾರಿ ಕರ್ನಲ್ ನಿತಿನ್ ಭಿಡೆ ಮಾತನಾಡಿ, ಭಾರತೀಯ ಸೈನಿಕರ ಜೀವನ ಕೇವಲ ಉದ್ಯೋಗವಲ್ಲ, ಅದು ರಾಷ್ಟ್ರಸೇವೆಯ ಸಂಕಲ್ಪವಾಗಿದೆ ಎಂದರು. ಕಾರ್ಗಿಲ್ ಯುದ್ಧದಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲೂ ಭಾರತೀಯ ಯೋಧರು ತೋರಿದ ಸಾಹಸ ವಿಶ್ವಕ್ಕೆ ಮಾದರಿಯಾಗಿದೆ. ಸೈನಿಕರು ಯುದ್ಧಭೂಮಿಗೆ ಸಾಯಲು ಅಲ್ಲ, ಮಾತೃಭೂಮಿಯನ್ನು ರಕ್ಷಿಸಲು ಹೋಗುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಪ್ರತಿಯೊಬ್ಬರೂ ತಮ್ಮ ಪ್ರತಿಭೆಯನ್ನು ಸಮಾಜ ಮತ್ತು ರಾಷ್ಟ್ರದ ಪ್ರಗತಿಗೆ ಬಳಸಬೇಕು ಎಂದು ಕರೆ ನೀಡಿದರು.
ಕರ್ನಲ್ ನಿತಿನ್ ಭಿಡೆ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ರಚಿಸಿದ್ದ ಅಮರ್ ಜವಾನ್ ಹಾಗೂ ಭಾರತ ಮಾತೆಯ ಭೂಪಟಕ್ಕೆ ಮುಖ್ಯ ಅತಿಥಿಗಳು ಮತ್ತು ಎನ್‌ಸಿಸಿ ಕೆಡೆಟ್‌ಗಳು ದೀಪಾರ್ಚನೆ ಹಾಗೂ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳು ಕಾರ್ಗಿಲ್ ಯುದ್ಧದ ಶೌರ್ಯ ಮತ್ತು ತ್ಯಾಗವನ್ನು ಬಿಂಬಿಸುವ ದೃಶ್ಯರೂಪಕ ಪ್ರದರ್ಶಿಸಿದರು.
ಸಂಸ್ಥೆಯ ಎನ್‌ಸಿಸಿ ನೌಕಾದಳ ಹಾಗೂ ಭೂದಳದ ಕೆಡೆಟ್‌ಗಳಿಗೆ ಬ್ಯಾರೆಟ್‌ಗಳನ್ನು ವಿತರಿಸಲಾಯಿತು. 'ಎ' ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಕೆಡೆಟ್‌ಗಳಿಗೆ 'ಎ' ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ನೌಕಾದಳದ 9 ಹಾಗೂ ಭೂದಳದ 10 ಕೆಡೆಟ್‌ಗಳು 'ಎ' ಗ್ರೇಡ್ ಪಡೆದರು.
ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಉಪಮುಖ್ಯೋಪಾಧ್ಯಾಯ ಜಯಶೀಲ ಉಪಸ್ಥಿತರಿದ್ದರು. ಪ್ರಜ್ವಲ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಸೌಮ್ಯ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನಡೆಸಿದರು. ಕೆಡೆಟ್ ಸಾನ್ವಿ ಕಾರ್ಗಿಲ್ ವಿಜಯ ದಿವಸದ ಮಹತ್ವ ತಿಳಿಸಿದರು. ಗಗನ ಸ್ವಾಗತಿಸಿದರು. ಕೆಡೆಟ್ ನಿಶ್ಚಯ ವಂದಿಸಿದರು. ತನ್ಮಯ್ ರಾಜ್ ಕಾರ್ಯಕ್ರಮ ನಿರೂಪಿಸಿದರು.