ಮೂಡುಬಿದಿರೆ: ಉಡುಪಿ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅವರು ಬಿಜೆಪಿ ಪ್ರತಿಭಟನೆಯ ವೇಳೆ ನೀಡಿದ ಹೇಳಿಕೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ನಿಂದನಾತ್ಮಕ ಹಾಗೂ ಕೊಲೆ ಬೆದರಿಕೆ ಒಳಗೊಂಡ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮೂಡುಬಿದಿರೆ ಪೊಲೀಸ್ ಠಾಣೆಗೆ ಶುಕ್ರವಾರ ದೂರು ಸಲ್ಲಿಸಲಾಯಿತು.

ಜುಲೈ 28ರಂದು ಬೆಳಿಗ್ಗೆ 11 ಗಂಟೆಗೆ ಉಡುಪಿ ನಗರ ಬಸ್ ನಿಲ್ದಾಣದ ಸಮೀಪ ಕಾಂಗ್ರೆಸ್ ಪಕ್ಷ ಹಾಗೂ ನೀಟ್ ಹೋರಾಟ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ ಯಶಪಾಲ್ ಸುವರ್ಣ, ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರ ವಂಶವನ್ನು ನಿರ್ನಾಮ ಮಾಡುವುದಾಗಿ ಹೇಳಿರುವುದಲ್ಲದೆ ಕೊಲೆ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇಂತಹ ಹೇಳಿಕೆಗಳು ಜನರ ನಡುವೆ ದ್ವೇಷವನ್ನು ಹುಟ್ಟುಹಾಕುವ ಉದ್ದೇಶ ಹೊಂದಿದ್ದು, ಬಿಜೆಪಿ ಕಾರ್ಯಕರ್ತರನ್ನು ಗುಂಪು ಗಲಭೆಗೆ ಪ್ರಚೋದಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೃತ್ಯವಾಗಿದೆ. ಆದ್ದರಿಂದ ಯಶಪಾಲ್ ಸುವರ್ಣ ಹಾಗೂ ಇತರರ ವಿರುದ್ಧ ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಜೈನ್ ನೇತೃತ್ವದಲ್ಲಿ ಸಲ್ಲಿಸಲಾದ ದೂರಿನ ಸಂದರ್ಭದಲ್ಲಿ ಹರ್ಷವರ್ಧನ್ ಪಡಿವಾಳ್, ಪದ್ಮಪ್ರಸಾದ್ ಜೈನ್, ಪುರಂದರ ದೇವಾಡಿಗ, ಜೋಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಮರ್ವಿನ್ ಲೋಬೋ, ಕುಮಾರ್ ಪೂಜಾರಿ, ಅರುಣ್ ಕುಮಾರ್ ಶೆಟ್ಟಿ, ಕೊರಗಪ್ಪ, ಪ್ರವೀಣ್ ಪೂಜಾರಿ, ಸತೀಶ್ ಕೋಟ್ಯಾನ್ ಮತ್ತಿತರರಿದ್ದರು.