ಮೂಡುಬಿದಿರೆ: ಪಾಲಡ್ಕ ಸಂತ ಇಗ್ನೇಷಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪಾಲಕರಾದ ಸಂತ ಇಗ್ನೇಷಿಯಸ್ ಅವರ ಹಬ್ಬವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನಾ ನೃತ್ಯದೊಂದಿಗೆ ಆರಂಭವಾಯಿತು. ಶಾಲಾ ನಾಯಕಿ ಜಿಯಾನ್ನ ಫೆರ್ನಾಂಡಿಸ್ ಆಗಮಿಸಿದ್ದ ಗೌರವಾನ್ವಿತ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ವಿದ್ಯಾರ್ಥಿಗಳು ಸಂತ ಇಗ್ನೇಷಿಯಸ್ ಅವರ ಜೀವನವನ್ನು ಸಾರುವ ನೃತ್ಯರೂಪಕ ಹಾಗೂ ವಿವಿಧ ನೃತ್ಯಗಳನ್ನು ಪ್ರದರ್ಶಿಸಿದರು. ಜ್ಯೋತ್ಸ್ನಾ ಡಿಕುನಾ ಸಂತ ಇಗ್ನೇಷಿಯಸ್ ಅವರ ಜೀವನ, ಆದರ್ಶಗಳು ಮತ್ತು ಮೌಲ್ಯಗಳ ಕುರಿತು ಮಾತನಾಡಿ, ಅವರ ಜೀವನ ಸಂದೇಶವು ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದ್ದು, ವಿದ್ಯಾರ್ಥಿಗಳು ಅದನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಫಾ.ಪಾವ್ಲ್ ಕ್ರಾಸ್ತಾ ಮಾತನಾಡಿ, ಸಂತ ಇಗ್ನೇಷಿಯಸ್ ಅವರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಶಾಲಾ ಮುಖ್ಯಶಿಕ್ಷಕಿ ಜೆಸಿಂತಾ ಸಿಕ್ವೇರಾ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಉಪನಾಯಕ ಈಥನ್ ನೋಯೆಲ್ ಸೆರಾವೊ ವಂದಿಸಿದರು.