ಮೂಡುಬಿದಿರೆ : ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊಳೆ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ಕೆ. ಎನ್. ಭಟ್ ಶಿರಾಡಿಪಾಲ್ ಹಾಗೂ ಬಲಿಪ ಪ್ರಸಾದ ಭಾಗವತರ ಸಂಸ್ಮರಣೆ ಕಾರ್ಯಕ್ರಮವು ಜು. 28ರಂದು ಅಪರಾಹ್ನ ನಡೆಯಿತು.
ಯಕ್ಷಗಾನ ಕಲಾವಿದ ಮತ್ತು ಉಪನ್ಯಾಸಕ ರಜನೀಶ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ. ಎನ್. ಭಟ್ ಶಿರಾಡಿಪಾಲರ ಸ್ಮರಣೆಯ ಶತಮಾನೋತ್ತರ ಸನ್ಮಾನ ಹಾಗೂ ಬಲಿಪ ಪ್ರಸಾದ ಭಾಗವತರ 50ರ ನೆನಪಿನ "ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್" ಸರಣಿಯ 13ನೇ ಸನ್ಮಾನವನ್ನು ವಿಶ್ರಾಂತ ಮುಖ್ಯೋಪಾಧ್ಯಾಯ, ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಯಕ್ಷಗುರು ಕೆ. ಅನಂತ ಪದ್ಮನಾಭ ಹೊಳ್ಳ ಅವರಿಗೆ ನೀಡಿ ಗೌರವಿಸಲಾಯಿತು.
ಅವಳಿ ಸನ್ಮಾನವನ್ನು ಸ್ವೀಕರಿಸಿದ ಕೆ. ಅನಂತ ಪದ್ಮನಾಭ ಹೊಳ್ಳ ಅವರು ಶಿರಾಡಿಪಾಲ್ ಕುಟುಂಬದೊಂದಿಗೆ ತಮ್ಮ ಒಡನಾಟವನ್ನು ಸ್ಮರಿಸಿದರು. ಯುವಾವಸ್ಥೆಯಲ್ಲಿಯೇ ಅಗಲಿದ ಬಲಿಪ ಪ್ರಸಾದ ಭಾಗವತರ ಸಾಧನೆ ಇಂದಿನ ಯುವ ಕಲಾವಿದರಿಗೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.
ಯಕ್ಷಸಂಗಮ ಮೂಡುಬಿದಿರೆ ಅಧ್ಯಕ್ಷ ಎಂ. ಶಾಂತರಾಮ ಕುಡ್ವ ಅವರು ಬಲಿಪ ಪ್ರಸಾದ ಭಾಗವತರನ್ನು ಸ್ಮರಿಸಿ, ಕಪ್ಪು ಮೂರು ಮತ್ತು ಬಿಳಿ ನಾಲ್ಕರ ಏರುಶ್ರುತಿಯಲ್ಲಿ ಹಾಡುತ್ತಿದ್ದ ಅವರ ಕಂಠಸಿರಿ ಇಂದಿಗೂ ಅಭಿಮಾನಿಗಳ ಹೃದಯಗಳಲ್ಲಿ ಅನುರಣಿಸುತ್ತಿದೆ ಎಂದು ಹೇಳಿದರು. ಕೆ. ಎನ್. ಭಟ್ ಶಿರಾಡಿಪಾಲರ ಅಳಿಯ ಜಿ.ವಿ. ಗಜೇಂದ್ರ ಗೊರಸುಕುಡಿಗೆ ಅವರು ಶಿರಾಡಿಪಾಲರ ಬಹುಮುಖ ಸಾಧನೆಗಳನ್ನು ವಿವರಿಸಿದರು.
ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್ ಸರಣಿ ಕಾರ್ಯಕ್ರಮದ ಗೌರವ ಸಲಹೆಗಾರ ರುಕ್ಕಯ್ಯ ಪೂಜಾರಿ ಅಳಿಯೂರು, ರೈತ ಮುಖಂಡ ಆಲ್ವಿನ್ ಮಿನೇಜಸ್ ಗಂಟಾಲ್ಕಟ್ಟೆ, ಸನ್ಮಾನಿತ ಕೆ. ಅನಂತ ಪದ್ಮನಾಭ ಹೊಳ್ಳ ಅವರ ಶಿಷ್ಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ವಾಸು ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೆ. ಎನ್. ಭಟ್ ಶಿರಾಡಿಪಾಲರ ಪುತ್ರಿ ನಿವೇದಿತಾ ಗಜೇಂದ್ರ ಅತಿಥಿಗಳನ್ನು ಗೌರವಿಸಿದರು. ಸನ್ಮಾನಿತರ ಪುತ್ರಿ ಸವಿತಾ, ಅಳಿಯ ಗುರುರಾಜ ಪಟೇಲ್ ಉಪಸ್ಥಿತರಿದ್ದರು. ಆಲ್ವಿನ್ ಮಿನೇಜಸ್ ಸನ್ಮಾನಪತ್ರ ವಾಚಿಸಿದರು. ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಸನ್ಮಾನಿತರನ್ನು ಪರಿಚಯಿಸಿದರು. ಜಿ.ವಿ. ಗಜೇಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.