ಕಾರ್ಕಳ: ಇಲ್ಲಿನ ಕ್ರಿಯೆಟಿವ್ ಗ್ಲೋಬಲ್ ಸ್ಕೂಲ್‌ನ 2026-27ನೇ ಸಾಲಿನ ನೂತನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭ ಜುಲೈ 31ರಂದು ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಂಸ್ಥಾಪಕರಾದ ಅಶ್ವಥ್ ಎಸ್.ಎಲ್., ಆದರ್ಶ ಎಂ.ಕೆ., ಡಾ. ಗಣನಾಥ್ ಶೆಟ್ಟಿ, ಗಣಪತಿ ಭಟ್ ಕೆ.ಎಸ್., ವಿಮಲ್ ರಾಜ್ ಹಾಗೂ ಅಮೃತ ರೈ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಗೌರವ ಬ್ಯಾಡ್ಜ್‌ಗಳನ್ನು ತೊಡಿಸಿ ಅಭಿನಂದಿಸಿದರು.
ವಿಮಲ್ ರಾಜ್ ಮಾತನಾಡಿ, ಶಿಕ್ಷಣದ ಜೊತೆಗೆ ನಾಯಕತ್ವ ಹಾಗೂ ಸಾಮಾಜಿಕ ಕಳಕಳಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಾಯಕತ್ವವು ಕೇವಲ ಅಧಿಕಾರವಲ್ಲ, ಅದು ಜವಾಬ್ದಾರಿ ಮತ್ತು ಶಿಸ್ತು ಎಂಬುದನ್ನು ಮನಗಾಣಿಸಿಕೊಂಡು ಶಾಲೆಯ ಗೌರವವನ್ನು ಹೆಚ್ಚಿಸುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಅಶ್ವಥ್ ಎಸ್.ಎಲ್. ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ದೊಡ್ಡ ಕನಸುಗಳನ್ನು ಕಾಣಬೇಕು. ಸಮಾಜದ ಒಳಿತಿಗಾಗಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಶಾಲಾ ಪ್ರಾಂಶುಪಾಲೆ ಅಕ್ಷತಾ ಶೆಣೈ, ನೂತನವಾಗಿ ಆಯ್ಕೆಯಾದ ಶಾಲಾ ನಾಯಕ ಪ್ರತ್ಯಕ್ಷ ನಾಯಕ್, ನಾಯಕಿ ಪ್ರಾಪ್ತಿ ನೆಲ್ಲಿ ಹಾಗೂ ವಿವಿಧ ಸದನಗಳ ನಾಯಕರು, ಕ್ರೀಡೆ, ಶಿಸ್ತು ಮತ್ತು ಸಾಂಸ್ಕೃತಿಕ ವಿಭಾಗಗಳ ಪ್ರತಿನಿಧಿಗಳಿಗೆ ಅಧಿಕಾರದ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರ ಬಳಗ, ಪೋಷಕರು ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.