ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 2025-26ನೇ ಸಾಲಿನ 15ನೇ ವಾರ್ಷಿಕ ಸಾಮಾನ್ಯ ಸಭೆಯು ಜುಲೈ 26ರಂದು ಪಡೀಲಿನ ಬೈರಾಡಿಕೆರೆ ಸಮೀಪದ ಸಂಘದ ಪ್ರಧಾನ ಕಚೇರಿ ‘ಆತ್ಮಶಕ್ತಿ ಸೌಧ’ದಲ್ಲಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ವರದಿ ಸಾಲಿನಲ್ಲಿ ಸಂಘವು ರೂ.308.58 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಯಿತು. ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮಂಡಿಸಿದರು. ಬಳಿಕ ಮಾತನಾಡಿದ ಚಿತ್ತರಂಜನ್ ಬೋಳಾರ್, ಸಂಘವು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 35 ಶಾಖೆಗಳನ್ನು ಹೊಂದಿದ್ದು, 2026-27ನೇ ಸಾಲಿನಲ್ಲಿ ಇನ್ನಷ್ಟು ಹೊಸ ಶಾಖೆಗಳನ್ನು ಆರಂಭಿಸಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಿದೆ ಎಂದರು.

ಪಾಲು ಬಂಡವಾಳವನ್ನು ರೂ.3 ಕೋಟಿಗೆ ಹೆಚ್ಚಿಸುವುದು, ಸದಸ್ಯರಿಂದ ರೂ.375 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸುವುದು ಹಾಗೂ ರೂ.325 ಕೋಟಿಗೂ ಅಧಿಕ ಸಾಲ ವಿತರಿಸುವ ಗುರಿಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಸದಸ್ಯರಿಗೆ ಉಚಿತ ವಿಮಾ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಂಘದ ಬೆಳವಣಿಗೆಗೆ ಸದಸ್ಯರ ಸಹಕಾರವೇ ಪ್ರಮುಖ ಕಾರಣವಾಗಿದ್ದು, ಸಿಬ್ಬಂದಿಯ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಎಲ್ಲ ಸದಸ್ಯರ ಸಹಕಾರ ಕೋರಿದ ಅವರು, ಸಂಘದ ಪ್ರಗತಿಗೆ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ವರದಿ ಸಾಲಿನಲ್ಲಿ ಸಂಘವು ಸದಸ್ಯರಿಂದ ರೂ.179.28 ಲಕ್ಷ ಷೇರು ಬಂಡವಾಳ ಹಾಗೂ ರೂ.30,531.54 ಲಕ್ಷ ಠೇವಣಿ ಸಂಗ್ರಹಿಸಿದೆ. ವರ್ಷಾಂತ್ಯಕ್ಕೆ ರೂ.27,884.33 ಲಕ್ಷ ಸಾಲ ವಿತರಿಸಿದ್ದು, ರೂ.32,317.19 ಲಕ್ಷ ದುಡಿಯುವ ಬಂಡವಾಳ ಹೊಂದಿದೆ.

72ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ‘ಉತ್ತಮ ಆಡಳಿತಾತ್ಮಕ ಸಹಕಾರಿ ಸಂಘ’ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಾಧನಾ ಪ್ರಶಸ್ತಿಯನ್ನು ಸತತ 10ನೇ ವರ್ಷ ಪಡೆದಿರುವುದಕ್ಕೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಖೆಗಳ ವಾರ್ಷಿಕೋತ್ಸವದ ಅಂಗವಾಗಿ ಆರೋಗ್ಯ ಶಿಬಿರಗಳ ಆಯೋಜನೆ ಹಾಗೂ ಸಿಬ್ಬಂದಿಯ ಗುಣಮಟ್ಟದ ಸೇವೆಯನ್ನು ಸಭೆಯಲ್ಲಿ ಶ್ಲಾಘಿಸಲಾಯಿತು.

ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಯಶೀಲ ಅಡ್ಯಂತಾಯ, ಆನಂದ ಕೆ. ಅಸೈಗೋಳಿ, ಸೇಸಪ್ಪ ಪೂಜಾರಿ, ಅಶೋಕ್, ರಕ್ಷಿತ್ ಕುಮಾರ್, ಸುಚಿತ್ರ, ಸುಂದರ ಹೆಗ್ಡೆ, ಟೀಪೇಶ್ ಎಸ್. ಅಮೀನ್, ಸುದೀರ್, ಸದಾನಂದ ಆಚಾರ್ಯ, ರೇವತಿ, ವೆಂಕಟೇಶ್ ಎಸ್. ಪೂಜಾರಿ ಹಾಗೂ ಮನೋಜ್ ಎಸ್. ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಜಿ. ಪರಮೇಶ್ವರ ಪೂಜಾರಿ, ಆನಂದ್ ಎಸ್. ಕೊಂಡಾಣ, ಸೀತಾರಾಮ್ ಎನ್., ರಮಾನಾಥ್ ಸನಿಲ್, ಬಿ.ಪಿ. ದಿವಾಕರ್, ಗೋಪಾಲ್ ಎಂ., ಚಂದ್ರಾವತಿ ಹಾಗೂ ಉಮಾವತಿ ಉಪಸ್ಥಿತರಿದ್ದರು. ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು. ನೇಮಿರಾಜ್ ಪಿ. ವಂದಿಸಿದರು. ಅಭಿನಂದನಾ ಪುರಸ್ಕಾರ ಕಾರ್ಯಕ್ರಮವನ್ನು ವಿಶ್ವನಾಥ ಹಾಗೂ ಧನಲಕ್ಷೀ ನಿರೂಪಿಸಿದರು.