ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷೆಯಾಗಿ ಸವಿತಾ ಟಿ.ಎನ್. ಆಯ್ಕೆಯಾಗಿದ್ದಾರೆ.

ಸವಿತಾ ಟಿ.ಎನ್. 2000ರಿಂದ 2005ರ ಅವಧಿಯಲ್ಲಿ ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದು, 2003ರಿಂದ 2005ರವರೆಗೆ ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿ 2 ಅಂಗನವಾಡಿ ಕಟ್ಟಡಗಳು, 3 ಕಿಂಡಿ ಅಣೆಕಟ್ಟುಗಳು, 12 ಮೋರಿಗಳು ಹಾಗೂ ಕಿಟ್ಟಿ ಭಟ್ಟರ ಮನೆಯ ಸಮೀಪ ಸಣ್ಣ ಸೇತುವೆ ನಿರ್ಮಾಣ ಸೇರಿದಂತೆ ಹಲವು ಜನೋಪಯೋಗಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದರು.

ಪಾಲಡ್ಕ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ ಅವಧಿಯಲ್ಲಿ ತಾವು ಪ್ರತಿನಿಧಿಸಿದ್ದ 3ನೇ ವಾರ್ಡ್‌ನ ಅಭಿವೃದ್ಧಿಗೆ ₹4.5 ಕೋಟಿಗೂ ಅಧಿಕ ಅನುದಾನ ತಂದು ಕಾಂಕ್ರೀಟ್ ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರು.

ಪುತ್ತಿಗೆ ಗ್ರಾಮದ ಕುಂಗೂರು ಕೇಂದ್ರವಾಗಿ 40ಕ್ಕೂ ಹೆಚ್ಚು ಯುವತಿಯರನ್ನು ಒಗ್ಗೂಡಿಸಿ ದಿವ್ಯಜ್ಯೋತಿ ಯುವತಿ ಮಂಡಲದ ಅಧ್ಯಕ್ಷೆಯಾಗಿ ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದರು.

ಪ್ರಸ್ತುತ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆಯಾಗಿ ಕಳೆದ ಎರಡು ವರ್ಷಗಳಿಂದ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮನ್ನಣೆ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷೆಯಾಗಿ ಸವಿತಾ ಟಿ.ಎನ್. ಅವರ ಆಯ್ಕೆಯನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.