ಮೂಡುಬಿದಿರೆ: ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭ ಶಾಲೆಯ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿ ಸಂಸತ್ತಿಗೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿದ್ದ ಬಂಟ್ವಾಳದ ಖ್ಯಾತ ವಕೀಲ ಅಶ್ವನಿ ಕುಮಾರ್ ರೈ ಎಂ, ಶಾಲಾ ಸಂಸತ್ತು ನಾಳಿನ ರಾಷ್ಟ್ರ ನಾಯಕರನ್ನು ರೂಪಿಸುವ ನಾಯಕತ್ವದ ವೇದಿಕೆಯಾಗಿದ್ದು, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ನಾಯಕತ್ವವು ಅಧಿಕಾರವಲ್ಲ, ಹೊಣೆಗಾರಿಕೆಯಾಗಿದೆ. ಶಾಲಾ ಸಂಸತ್ತಿನ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥೈಸಿಕೊಂಡು ಸೇವೆ, ಶಿಸ್ತು ಹಾಗೂ ಸಮರ್ಪಣೆಯ ಮನೋಭಾವದಿಂದ ಮುನ್ನಡೆಯುವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್, ವಿದ್ಯಾರ್ಥಿಗಳು ಉತ್ತಮ ನಾಯಕತ್ವ, ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ದೇಶದ ಸಮರ್ಥ ನಾಗರಿಕರಾಗಲಿ ಎಂದು ಆಶಿಸಿದರು.
ಅಶ್ವನಿ ಕುಮಾರ್ ರೈ ಎಂ ಹಾಗೂ ರಶ್ಮಿತಾ ಜೈನ್ ನೂತನ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್‌ಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಹೆರಿಟೇಜ್, ಸಾಂಸ್ಕೃತಿಕ, ಇಕೋ, ಸಾಹಿತ್ಯ, ಕ್ರೀಡಾ, ಗಣಿತ ಹಾಗೂ ವಿಜ್ಞಾನ ಕ್ಲಬ್‌ಗಳಿಗೆ ಚಾಲನೆ ನೀಡಲಾಯಿತು. ವಿವಿಧ ಹೌಸ್‌ಗಳ ಧ್ವಜಗಳನ್ನು ಹಸ್ತಾಂತರಿಸಿ ಕ್ಲಬ್ ಹಾಗೂ ಹೌಸ್ ಚಟುವಟಿಕೆಗಳಿಗೂ ಅಧಿಕೃತ ಚಾಲನೆ ನೀಡಲಾಯಿತು.
ಶಾಲೆಯ ಪ್ರಾಂಶುಪಾಲ ಶ್ರೀಪ್ರಸಾದ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಹಾಗೂ ಕಾರ್ಯಯೋಜನೆಗಳನ್ನು ಮಂಡಿಸಿದರು.
ಪ್ರಾಂಶುಪಾಲ ಶ್ರೀಪ್ರಸಾದ್, ಸಿಬಿಎಸ್‌ಇ ಸಂಯೋಜಕಿ ವಿಮಲ, ಶಿಕ್ಷಕಿ ಸಹನಾ, ಶಾಲಾ ನಾಯಕ ನವನೀತ್ ಹಾಗೂ ಶಾಲಾ ನಾಯಕಿ ಪೂರ್ವಿ ಉಪಸ್ಥಿತರಿದ್ದರು. ನವನೀತ್ ಸ್ವಾಗತಿಸಿದರು, ಪೂರ್ವಿ ವಂದಿಸಿದರು ಹಾಗೂ ಶಿಕ್ಷಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.